ನಾಪೋಕ್ಲು ಜ.11 NEWS DESK : ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಪಾಲೂರು ಗ್ರಾಮದಲ್ಲಿ ವಿದ್ಯುತ್ ದೀಪಗಳಿಲ್ಲದೆ ಕಗ್ಗತ್ತಲು. ಹತ್ತು ದಿನದ ಗಡುವು ತಪ್ಪಿದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ಎನ್.ಎಂ.ಪೊನ್ನಣ್ಣ ಎಚ್ಚರಿಸಿದರು. ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೂರು – ಕೇಮಾಟ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಯಾವುದೇ ವಿದ್ಯುತ್ ದೀಪದ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಲಭಿಸಿಲ್ಲ. ಪಂಚಾಯಿತಿ ಬೇಜವಾಬ್ದಾರಿತನದಿಂದಾಗಿ ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದರು. ಗ್ರಾಮದಲ್ಲಿ ವಿದ್ಯುತ್ ದೀಪಗಳು ಇಲ್ಲದೆ ರಸ್ತೆಗಳು, ಬಸ್ ತಂಗುದಾಣ, ಶಾಲೆ, ಅಂಗನವಾಡಿ ಕೇಂದ್ರ, ಪುರಾತನ ಇತಿಹಾಸವಿರುವ ವಿಷ್ಣು ದೇವಾಲಯ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯಾಪ್ತಿಯಲ್ಲಿ ಕಗ್ಗತ್ತಲು ಆವರಿಸಿದ್ದು, ಅಪರಾಧ ಕೃತ್ಯಗಳು ನಡೆಯುವ ವಾತಾವರಣ ನಿರ್ಮಾಣವಾಗಿದೆ ಎಂದರು. ಗ್ರಾಮದ ಕೇಮಾಟ್-ಬಕ್ಕ ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರು, ಶಾಲಾ ಮಕ್ಕಳಿಗೆ ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿದೆ. ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗ್ರಾಮಕ್ಕೆ ಶೀಘ್ರ ವಿದ್ಯುತ್ ದೀಪಗಳ ಸೌಲಭ್ಯಗಳನ್ನು ಕಲ್ಪಿಸಬೇಕು, ತಪ್ಪಿದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರು ಆಗಿರುವ ಎ.ಎಸ್.ಪೆÇನ್ನಣ್ಣ ಅವರಿಗೆ ಮನವಿ ನೀಡಿ ಗ್ರಾಮಸ್ಥರು ಬೆಟ್ಟಗೇರಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದಾಗಿ ಎಚ್ಚರಿಕೆ ನೀಡಿದರು. ಬೆಟ್ಟಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಎ.ರಾಮಣ್ಣ ಮಾತನಾಡಿ, ನಾನು ಸ್ವಂತ ಖರ್ಚಿನಿಂದ ಹಲವಾರು ಬಾರಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದೆ ಆದರೆ ಈಗ ಪಂಚಾಯಿತಿ ನಮ್ಮ ಗ್ರಾಮವನ್ನು ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲೂರು ಗ್ರಾಮಸ್ಥರಾದ ಪಿ.ಡಿ.ತಿಮ್ಮಯ್ಯ, ಎಂ.ಯು.ನವೀನ್, ಎಂ.ಯು.ಅಯ್ಯಪ್ಪ, ಎಂ.ಜೆ.ಬೋಪಣ್ಣ, ಪಿ.ಯು.ಅಚ್ಚಯ್ಯ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.