ಮಡಿಕೇರಿ ಜ.28 NEWS DESK : ಶ್ರೀಮಂಗಲದ ಜೆ.ಸಿ.ವಿದ್ಯಾ ಸಂಸ್ಥೆಯ 35ನೇ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೊಟ್ರಂಗಡ ಸುಬ್ರಮಣಿ ಪ್ರತಿಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ತಂದು ಕೊಡುವುದಲ್ಲದೆ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮಾಂತರ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದು ಕೊಟ್ಟಿದ್ದು ನಮ್ಮ ಸಂಸ್ಥೆಯ ಸಾಧನೆ ಎಂದರು. ಇದಕ್ಕೆ ಶ್ರಮಿಸಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಕರೆಸ್ಪಾಂಡೆಂಟ್ ಮಚ್ಚಮಾಡ ಸುರೇಶ್ ಮಾತನಾಡಿ, ಈ ವಿದ್ಯಾ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆದ ವಿದ್ಯಾರ್ಥಿಗಳು ಇಂದು ಡಾಕ್ಟರ್, ಇಂಜಿನಿಯರ್, ಸೈನಿಕರಾಗಿ, ಕ್ರೀಡಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಶಾಲೆಯ ಆಡಳಿತ ಅಧಿಕಾರಿ ಕೊಟ್ರಂಗದ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಾವು ಸದಾಸಿದ್ಧ ಎಂದು ಹೇಳಿದರಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಸತೀಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಂಧು ವಾರ್ಷಿಕ ವರದಿ ವಾಚಿಸಿದರು. ಸಹ ಶಿಕ್ಷಕ ಪ್ರಸನ್ನ ಹಾಗೂ ಶಿಕ್ಷಕಿ ಚಂಚಲ ನಿರೂಪಿಸಿದರು. ಪ್ರೌಢಶಾಲೆಯ ಸಹಶಿಕ್ಷಕರಾದ ಬಿಂದುಸಾರ ವಂದಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಚರಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಸಹ ಶಿಕ್ಷಕ ಪ್ರಸನ್ನ ಬಹುಮಾನ ವಿತರಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.