


ಮಡಿಕೇರಿ ಫೆ.13 NEWS DESK : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್ ಇಂಟ್ಯಾಂಜಿಬಲ್ (ಅದೃಶ್ಯ) ಮತ ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಫೆ.14 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶುಕ್ರವಾರ ಬೆಳಿಗ್ಗೆ 10.30 ಗಂಟೆಯಿಂದ 11.30ರ ವರೆಗೆ ಸತ್ಯಾಗ್ರಹ ನಡೆಸಿ ಕೊಡವರ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರಿಗೆ ಕೊಡವ ಸಂಪ್ರದಾಯಿಕ ಜನ್ಮಭೂಮಿಯಲ್ಲಿ ಪ್ರತ್ಯೇಕ ಲೋಕಸಭೆ ಮತ್ತು ಅಸಂಬ್ಲಿ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. 2026ರಲ್ಲಿ ಸಂಸತ್ತಿನ ಮತ್ತು ಅಸೆಂಬ್ಲಿಯ ಕ್ಷೇತ್ರದ ಗಡಿ ಹಾಗೂ ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತಿದ್ದು, ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ರಾಜ್ಯದಲ್ಲಿ ಗರಿಷ್ಠ ಪ್ರಾತಿನಿಧ್ಯವನ್ನು ಹೊಂದಿರುವ ಜನಸಂಖ್ಯಾ ಪ್ರಾಬಲ್ಯದ ಕೂಟ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲ್ಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸಿ ಶಾಶ್ವತವಾಗಿ ತಾವು ಸಂಸತ್ ಪ್ರಾತಿನಿಧ್ಯ ಪಡೆಯುವುದರೊಂದಿಗೆ ಸಂಸತ್ತಿನಲ್ಲಿ ಕೊಡವರಿಗೆ ಪ್ರಾತಿನಿಧ್ಯ ದಕ್ಕದಂತೆ ಒಳಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 2023 ಮತ್ತು 2024 ರಲ್ಲಿ ಸಿಎನ್‍ಸಿ ಸತ್ಯಾಗ್ರಹ ನಡೆಸುವ ಮೂಲಕ ಸಾಂಕೇತಿಕವಾಗಿ ಈ ವಿಷಯವನ್ನು ಪ್ರಸ್ತಾಪಿಸಿತು. ಫೆ.3ರಂದು ಸಿಎನ್‍ಸಿ ಕಾರ್ಯಕರ್ತರು ಪವಿತ್ರ ಕೊಡವ ಯಾತ್ರಾಸ್ಥಳವಾದ ತಲಕಾವೇರಿಯಲ್ಲಿ ಪುಣ್ಯ ಪ್ರಾರ್ಥನೆಯ ಮೂಲಕ ಪ್ರತಿಜ್ಞೆ ಮಾಡಿ ಜನರ ಮಂಜೂರಾತಿಯನ್ನು ಪಡೆಯಲು ಕೊಡವಲ್ಯಾಂಡ್ ನಾದ್ಯಂತ ವರ್ಷವಿಡೀ ಪ್ರಚಾರ ಕಾರ್ಯಕ್ಕಾಗಿ ದೈವಿಕ ಜೀವಜಲ ಕಾವೇರಿ ನದಿಯಿಂದ ಆಶೀರ್ವಾದ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಐತಿಹಾಸಿಕವಾಗಿ, ಕೊಡವರು 1946 ರಿಂದ 1950 ರವರೆಗೆ ಭಾರತದ ಸಂವಿಧಾನ/ರಾಜ್ಯಾಂಗ ಘಟನಾ ಸಭೆಯಲ್ಲಿ ಪ್ರಾತಿನಿಧ್ಯವನ್ನು ಹೊಂದಿದ್ದರು. ಆದರೆ ಅವರ ಸಾಂಪ್ರದಾಯಿಕ ತಾಯ್ನಾಡಿನ ವಿಲೀನದ ನಂತರ ಅದನ್ನು ಕಳೆದುಕೊಂಡರು. ತಮ್ಮ ಅತೀ ಕಡಿಮೆ ಜನಸಂಖ್ಯೆಯ ಹೊರತಾಗಿಯೂ, ಕೊಡವರು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರ-ನಿರ್ಮಾಣಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಎಂದು ಗಮನ ಸೆಳೆದಿದ್ದಾರೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆದಿಮಸಂಜಾತ ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕುಗಳಿಗಾಗಿ ಸಂವಿಧಾನ 371 ಮತ್ತು 244 ವಿಧಿ ಹಾಗೂ 6ನೇ ಮತ್ತು 8ನೇ ಶೆಡ್ಯೂಲ್, ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಹಕ್ಕುಗಳ ಮಾನ್ಯತೆ ಮತ್ತು ಸಂವಿಧಾನದ 340-342 ವಿಧಿಗಳ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ಆದಿಮ ಬುಡಕಟ್ಟು ವರ್ಗೀಕರಣ ಹಾಗೂ ನಮ್ಮ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರಕ್ಕೆ ಸಂವಿಧಾನದ ವಿಶೇಷ ಖಾತರಿಗಾಗಿ ಸತ್ಯಾಗ್ರಹದ ಸಂದರ್ಭ ಒತ್ತಾಯಿಸಲಾಗುತ್ತದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.