ನಾಪೋಕ್ಲು ಫೆ.13 NEWS DESK : ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಲ್ಪಡುವ ಹಬ್ಬಗಳು ದೇಶದ ನೈಜ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ಪಯ್‍ನರಿ ದರ್ಗಾದ ವಾರ್ಷಿಕ ಉರುಸ್ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಎಲ್ಲರೂ ಅವರವರ ಧರ್ಮ ಪಾಲನೆ ಮತ್ತು ಆಚರಣೆಗಳನ್ನು ಸ್ವತಂತ್ರವಾಗಿ ಆಚರಿಸುವಂತಾಗಬೇಕು ಎಂಬುದೇ ಈ ದೇಶದ ಸಂವಿಧಾನದ ಮೂಲ ಉದ್ದೇಶ. ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ ಹಲವಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನ್ಯಾಯ ಒದಗಿಸುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ವಿರಾಜಪೇಟೆ ಕ್ಷೇತ್ರದಲ್ಲೂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಇದರಲ್ಲಿ ಹಲವು ಕಾಮಗಾರಿಗಳು ಮುಕ್ತಾಯವಾಗಿದೆ. ಕುಂಜಿಲ ವ್ಯಾಪ್ತಿಯಲ್ಲಿ ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಭರವಸೆಯಂತೆ ರಸ್ತೆ ಹಾಗೂ ವಿವಿಧ ಕಾಮಗಾರಿಗಳು ನಡೆಸಲಾಗಿದೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಎಲ್ಲರೂ ಸಹೋದರತೆಯಿಂದ ಒಗ್ಗಟ್ಟಾಗಿ ಬಾಳಬೇಕು ಎಂದರು. ಕಾರ್ಯಕ್ರಮದಲ್ಲಿ ಕಕ್ಕಬ್ಬೆಯ ಶ್ರೀ ಭಗವತಿ ದೇವಸ್ಥಾನದ ದೇವ ತಕ್ಕ ಪಾಂಡಂಡ ನರೇಶ್, ಬೆಳೆಗಾರ ಮಲ್ಲಚಂಡ ಚೇತನ್, ಬಾಚಮಂಡ ರಾಜ ಪೂವಣ್ಣ ಮಾತನಾಡಿದರು. ಉರೂಸ್ ಸಮಾರಂಭದಲ್ಲಿ ಕೇರಳದ ವಾಗ್ಮಿ ಹಾಫೀಜ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಿದರು. ಕುಂಜಿಲ ಪೈನರಿ ಮುಸ್ಲಿಂ ಜಮಾಯತ್ ಅಧ್ಯಕ್ಷ ಸೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೈನರಿ ಮಸೀದಿಯ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟಿಸಿದರು. ತಕಿಯುದ್ದೀನ್ ಜೀಲಾನಿ ತಂಙಳ್ ಲಕ್ಷದ್ವಿಪ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನಾಪೆÇೀಕ್ಲು ಜಮಾಯತ್ ಅಧ್ಯಕ್ಷ ಎಮ್.ಹೆಚ್.ಅಬ್ದುಲ್ ರೆಹೆಮಾನ್, ಕೆಎಂಜೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ,ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಧರ್ಮ ಗುರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉರೂಸ್ ಸಮಾರಂಭದ ಪ್ರಯುಕ್ತ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಭಕ್ತರಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ವರದಿ : ದುಗ್ಗಳ ಸದಾನಂದ.











