ನಾಪೋಕ್ಲು ಫೆ.13 NEWS DESK : ವಿದ್ಯಾರ್ಥಿಗಳು ನಿರಂತರವಾದ ಅಧ್ಯಯನ ಮತ್ತು ಪರಿಶ್ರಮದಿಂದ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ಹೇಳಿದರು. ಚೇರಂಬಾಣೆ ಅರುಣ ವಿದ್ಯಾ ಸಂಸ್ಥೆಯಲ್ಲಿ ಓಜಸ್ವಿ ಚೈತನ್ಯ ಫೌಂಡೇಶನ್ ವತಿಯಿಂದ ಬೆಂಗಳೂರು ಕೊಡಗು ಗೌಡ ಸಮಾಜ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ “ನಾನು ಮತ್ತು ನನ್ನ ಭವಿಷ್ಯ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಗುರಿಯ ಸ್ಪಷ್ಟತೆಯನ್ನು ಹೊಂದಿರಬೇಕು ಎಂದ ಅವರು ಜೀವನದಲ್ಲಿ ಯಾವುದೇ ವ್ಯಸನಕ್ಕೆ ಬಲಿಯಾಗದೆ ಸಮಾಜ ಮತ್ತು ದೇಶದ ಹಿತವನ್ನು ಕಾಪಾಡುವ ಸಜ್ಜನಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಬೆಂಗಳೂರು ಗೌಡ ಸಮಾಜದ ಉಪಾಧ್ಯಕ್ಷರಾದ ಅಯ್ಯಟಿರ ಮೋಹನ್, ಬೇಕಲ್ ಬಿಪಿನ್, ಅಳ್ಮಂಡ ಮೋಹನ್ ದೇವಯ್ಯ, ಅರುಣ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎಸ್.ಸುಬ್ಬಯ್ಯ, ಬೋಧಕರು, ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಓಜಸ್ವಿ ಚೈತನ್ಯ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಡಾ.ಕವಿತಾ, ಬ್ರಿಜೇಶ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನೀಡಿ ಮಾರ್ಗದರ್ಶನ ಮಾಡಿದರು. ಕಾಲೇಜಿನ ಪ್ರಾಂಶುಪಾಲರದ ಡಿ.ಎಸ್.ರಾಮಕೃಷ್ಣ ಸ್ವಾಗತಿಸಿದರು. ಅಧ್ಯಾಪಕಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ಸಿ.ಆರ್.ಲೋಕೇಶ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.











