


ಮಡಿಕೇರಿ NEWS DESK ಮಾ.9 : ಕೊಡಗು ಜಿಲ್ಲೆಯ ಮೇಲಿನ ಅಪಾರ ಕಾಳಜಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮಂದಿ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಆಸಕ್ತಿಯಿಂದ ಕೊಡಗು ಜಿಲ್ಲೆಗೆ ಹಿಂದೆಂದಿಗಿಂತಲೂ ಅಧಿಕ ಅನುದಾನ ಈ ಬಾರಿಯ ಬಜೆಟ್ ನಲ್ಲಿ ಹರಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಶಾಸಕದ್ವಯರ ಮೇಲೆ ಜಿಲ್ಲೆಯ ಜನರ ಪ್ರೀತಿ ಹೆಚ್ಚಾಗುತ್ತಲೇ ಇದ್ದು, ಇದನ್ನು ಸಹಿಸದ ಬಿಜೆಪಿ ವಿನಾಕಾರಣ ಪ್ರತಿಭಟನೆಗಳನ್ನು ಮಾಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಟೀಕಿಸಿದ್ದಾರೆ. ಮಡಿಕೇರಿ – ದೋಣಿಗಲ್ -ಮಾದಾಪುರ – ಸೋಮವಾರಪೇಟೆ – ಶನಿವಾರಸಂತೆ – ಕೊಡ್ಲಿಪೇಟೆಯ 95 ಕಿ.ಮೀ ಅಂತರದ ಮಾರ್ಗವನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನವನ್ನು ಘೋಷಿಸಿದೆ. ಇದಕ್ಕೆ ಕಾರಣಕರ್ತರಾದ ಶಾಸಕರು ಅಭಿನಂದನಾರ್ಹರು. ಇತ್ತೀಚೆಗೆ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭ ಶಾಸಕರ ಕುರಿತು ವೈಯುಕ್ತಿಕ ಟೀಕೆ ಮಾಡಲಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಸರ್ವಜನರ ಹಿತ ಕಾಯುವ ಬಜೆಟ್ ನ್ನು ಮುಖ್ಯಮಂತ್ರಿಗಳು ಮಂಡಿಸಿದ್ದು, ಆರ್ಥಿಕ ತಜ್ಞರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯ ಕುರಿತು ಸ್ವತ: ರಾಜ್ಯಪಾಲರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದನ್ನೂ ಸಹಿಸದ ಬಿಜೆಪಿ ಹತಾಶೆಯಿಂದ ಟೀಕೆಗಳನ್ನು ಮಾಡುವುದರಲ್ಲೇ ನಿರತವಾಗಿದೆ. ಕಳೆದ 20 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಶಾಸಕರು ಕೇವಲ ಎರಡು ವರ್ಷಗಳಲ್ಲಿ ಮಾಡಬೇಕಾಗಿತ್ತೆಂದು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳು ಹಾಸ್ಯಾಸ್ಪದವಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದು, ಜನ ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ರಸ್ತೆ, ಸೇತುವೆ, ಆಸ್ಪತ್ರೆಗಳ ಅಭಿವೃದ್ಧಿಗಾಗಿ ನಿರೀಕ್ಷೆಗೂ ಮೀರಿ ಅನುದಾನವನ್ನು ಘೋಷಿಸಲಾಗಿದೆ. ಇದೆಲ್ಲವೂ ಜಿಲ್ಲೆಯ ಇಬ್ಬರು ಶಾಸಕರ ಪ್ರಯತ್ನದ ಫಲವಾಗಿದೆ. ದಿನಗಳು ಕಳೆದಂತೆ ಶಾಸಕರುಗಳ ಮೇಲೆ ಜನರ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತಿದೆ. ಇನ್ನುಳಿದಿರುವ ಮೂರು ವರ್ಷಗಳಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ ಎಂದು ತಿಳಿಸಿರುವ ಕೆ.ಎ.ಯಾಕುಬ್, ಬಜೆಟ್ ವಿಚಾರದಲ್ಲೂ ಜಾತಿ ರಾಜಕಾರಣ ಮಾಡುತ್ತಿರುವ ಬಿಜೆಪಿಯ ನಡೆ ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.