


ಮಡಿಕೇರಿ NEWS DESK ಮಾ.9 : ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಮತ್ತು ಅತ್ಯುತ್ತಮ ವರದಿಗಳಿಗೆ ನೀಡಲಾಗುವ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ, ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಮಂಡಿಬೆಲೆ ರಾಜಣ್ಣ ಮಾತನಾಡಿ, ಪತ್ರಿಕೋದ್ಯಮ ಇಂದು ಕವಲು ದಾರಿಯಲ್ಲಿದ್ದು, ನಷ್ಟದ ಹಾದಿಯಲ್ಲಿದೆ. ಪತ್ರಕರ್ತರು ವೃತ್ತಿಯನ್ನಾಗಿ ತೆಗೆದುಕೊಂಡು ಪತ್ರಿಕೆಯಲ್ಲಿ ಕೆಲಸ ಮಾಡಿದಲ್ಲಿ ಜೀವನ ನಡೆಸುವುದು ಕಷ್ಟು. ಇದನ್ನು ಕೇವಲ ಪ್ರವೃತ್ತಿಯನ್ನಾಗಿ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಹೆಚ್ಚಿನ ಪತ್ರಕರ್ತರು ಇಂದು ವೃತ್ತಿಗೆ ಅಗೌರವ ತರುವ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಮೊದಲು ವೃತ್ತಿಗೆ ಗೌರವ ತರುವ ಕೆಲಸವನ್ನು ಪತ್ರಕರ್ತರಿಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, ಯಾವುದೇ ಸಂಘಟನೆಗಳು ವಿಭಜನೆಗೊಳ್ಳುತ್ತಾ ಸಾಗಿದಲ್ಲಿ, ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಿಂದೆ ಪತ್ರಿಕೆಯಲ್ಲಿ ಹಲವಾರು ತನಿಖಾ ವರದಿಗಳು ಬರುತ್ತಿದ್ದವು. ಆದರೆ, ಇಂದು ಅಂತಹ ವರದಿಗಳು ಪತ್ರಿಕೆಯಿಂದ ಮಾಯವಾಗಿವೆ. ಸಾಕಷ್ಟು ಸವಲತ್ತುಗಳನ್ನು ಸರ್ಕಾರ ಪತ್ರಕರ್ತರಿಗೆ ನೀಡಿದರೂ, ಅವುಗಳಿಗೆ ವಿಧಿಸಿರುವ ಮಾನದಂಡದಿಂದಾಗಿ ಅದು ಎಲ್ಲ ಪತ್ರಕರ್ತರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಮಾನದಂಡಗಳನ್ನು ಸರ್ಕಾರ ಮಾಡಬೇಕೆಂದು ಹೇಳಿದರು. ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಬರವಣಿಗೆಯನ್ನು ಸಮಾಜದ ಹಿತಕ್ಕಾಗಿ ಬಳಸಬೇಕು. ಒಗ್ಗಟ್ಟಿನಿಂದ ಯಾವುದೇ ಕೆಲಸ ಮಾಡಿದರೂ, ಅದರಿಂದ ಯಶ ಸಾಧ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಕೇಶವ ಕಾಮತ್ ಮಾತನಾಡಿ, ಯಾವುದೇ ನೂತನ ಸಂಘಗಳನ್ನು ಕಟ್ಟಿಬೆಳೆಸುವುದು ಕಷ್ಟದ ಕೆಲಸ. ಸಂಘದ ಸದಸ್ಯರೆಲ್ಲರೂ, ಒಂದಾಗಿ ಸಂಘದ ದ್ಯೇಯೋದ್ಧೇಶಗಳ ಈಡೇರಿಕೆಗಾಗಿ ದುಡಿಯಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ವಹಿಸಿದ್ದರು. ವೇದಿಕೆಯಲ್ಲಿ ಪತ್ರಿಕಾಭವನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಂಜಿತ್ ಇದ್ದರು. ಸಂಘದಿಂದ ನೀಡಲಾಗುವ ಪ್ರಶಸ್ತಿಗಳಿಗೆ 6 ಮಂದಿ ಪತ್ರಕರ್ತರು ಭಾಜನಾಗಿದ್ದು, ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಜಾಪ್ರಭುತ್ವದ ದೇಗುಲದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ದುಷ್ಕರ್ಮಿಗಳು ಎಂಬ ವರದಿಗೆ ಎಚ್.ಟಿ. ಅನಿಲ್, ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ಸೌಲಭ್ಯ ವಂಚಿತ ನಾಗರ ಹೊಳೆ ಆಶ್ರಮ ಶಾಲೆ ಎಂಬ ವರದಿಗೆ ವಿನೋದ್ ಮೂಡಗದ್ದೆ ಪಡೆದರು. ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಏಲಕ್ಕಿ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ ಎಂಬ ವರದಿಗೆ ಡಿ.ಪಿ.ಲೋಕೇಶ್ ಅವರಿಗೆ, ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ವಿಘ್ನೇಶ್ ಭೂತನಕಾಡು ಅವರ ಏಷ್ಯನ್ ಗೇಮ್ಸ್ ಗೆ ಪುಟ್ಟ ಜಿಲ್ಲೆ ಕೊಡಗಿನ ಕ್ರೀಡಪಟುಗಳು ಎಂಬ ವರದಿಗೆ ದೊರೆಕಿತು. ಸಂಘದ ಸಲಹೆಗಾರರು ಹಾಗೂ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ಉಷಾ ಪ್ರೀತಮ್ ಅವರ ಆದಿವಾಸಿಗಳಿಗೆ ಬೇಕಿದೆ ಜಾಗೃತಿ ಬಾಲ್ಯವಿವಾಹ ತಂದಿಟ್ಟ ಸಂಕಷ್ಟ ಎಂಬ ವರದಿಗೆ ಲಭಿಸಿತು. ದೃಶ್ಯಮಾಧ್ಯಮ ವಿಭಾಗದಲ್ಲಿ ಮಾನವೀಯ ವರದಿ ಪ್ರಶಸ್ತಿ ಕೊಡಗು ಚಾನಲ್‌ನ ಟಿ.ಜೆ. ಪ್ರವೀಣ್ ಅವರ ಕಾಡಂಚಿನಿಂದ ನಾಡಿಗೆ ಬಂದವರ ಶೋಚನೀಯ ಸ್ಥಿತಿ ಎಂಬ ವರದಿಗೆ ಹಾಗೂ ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತು ಟಿವಿ 1ರಲ್ಲಿ ಪ್ರಕಟಿಸಿದ ಎಚ್.ಟಿ. ಅನಿಲ್ ಅವರ ಸಾಲು ಸಾಲು ರಜೆಯಲ್ಲಿ ಮಂಜಿನ ನಗರಿಯಲ್ಲಿ ಕಾಡುವ ಟ್ರಾಫಿಕ್ ಸಮಸ್ಯೆ ಎಂಬ ವರದಿಗೆ ಲಭಿಸಿತು.