



ಮಡಿಕೇರಿ ಮಾ.18 NEWS DESK : ಮಡಿಕೇರಿ ನಗರದ ಅಶೋಕಪುರದ ಡಾ.ಅಂಬೇಡ್ಕರ್ ಭವನದ ಸಮೀಪ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ಮುಂದಾಗಿದ್ದು, ಈ ಯೋಜನೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ಅಶೋಕಪುರ ಸಮಿತಿಯ ಸದಸ್ಯ ಹೆಚ್.ಎನ್.ಯೋಗೇಶ್ ಕುಮಾರ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯಾಗಿದೆ, ಆದರೆ ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರತಿಮೆ ನಿರ್ಮಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಯಾರೂ ಮಾಡಿರಲಿಲ್ಲ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಪ್ರತಿಮೆ ನಿರ್ಮಾಣ ಸಮಿತಿ ಹಾಗೂ ಡಾ.ಅಂಬೇಡ್ಕರ್ ಭವನ ಸಮಿತಿಯ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಅವರು ಮುಂದಾಗಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ದೇಶದ ಸಮಗ್ರತೆ ಮತ್ತು ಏಕತೆಗೆ ಕಾರಣಕರ್ತರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಕೊಡಗು ಜಿಲ್ಲೆಯಲ್ಲಿ ಕೂಡ ಸ್ಥಾಪಿಸಬೇಕೆಂದು ಕಳೆದ ಅನೇಕ ವರ್ಷಗಳಿಂದ ದಲಿತ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಆದರೆ ಇಲ್ಲಿಯವರೆಗೆ ಯಾವುದೇ ಆಡಳಿತ ವ್ಯವಸ್ಥೆ ಈ ಯೋಜನೆ ಕುರಿತು ಕಾಳಜಿ ತೋರಿಲ್ಲ. ಇದೀಗ ಪ್ರತಿಮೆ ನಿರ್ಮಾಣ ಸಮಿತಿ ಪ್ರತಿಮೆ ಸ್ಥಾಪನೆಗೆ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲಾ ಜಾತಿ, ಜನಾಂಗಗಳು, ಸಂಘ ಸಂಸ್ಥೆಗಳು ಹಾಗೂ ಡಾ.ಅಂಬೇಡ್ಕರ್ ಅನುಯಾಯಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಮೆ ಸ್ಥಾಪನೆಗೆ ಯಾರೂ ಅಡ್ಡಿ ಪಡಿಸಬಾರದು ಎಂದು ಯೋಗೇಶ್ ಕುಮಾರ್ ಒತ್ತಾಯಿಸಿದ್ದಾರೆ. ಪ್ರತಿಮೆ ನಿರ್ಮಾಣದ ಯೋಜನೆಗೆ ಮುಂದಾಗಿರುವ ಡಾ.ಅಂಬೇಡ್ಕರ್ ಭವನ ಸಮಿತಿಯ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.