



ಮಡಿಕೇರಿ ಮಾ.18 NEWS DESK : ಜಿಲ್ಲಾಡಳಿತ ಸೂಚಿಸಿದ ಸ್ಥಳವನ್ನು ಹೊರತುಪಡಿಸಿ ಪ್ರತ್ಯೇಕ ಸ್ಥಳದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಕೆಲವರು ಮುಂದಾಗಿದ್ದು, ಇದು ಖಂಡನೀಯವೆಂದು ಡಾ.ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಉಪಾಧ್ಯಕ್ಷ ಟಿ.ಎನ್.ಗೋವಿಂದಪ್ಪ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಜಿಲ್ಲಾಡಳಿತ ಹಾಗೂ ನಗರಸಭೆಯ ಸೂಚನೆಗೆ ವಿರುದ್ಧವಾಗಿ ಪ್ರತ್ಯೇಕ ಸ್ಥಳದಲ್ಲಿ ಪ್ರತಿಮೆ ನಿರ್ಮಿಸಲು ಪ್ರಭಾವಿ ರಾಜಕರಣಿಯೊಬ್ಬರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರ್ ಭವನದ ಗೊಂದಲ ಬಗೆಹರಿಯುವ ಮೊದಲೇ ಅದೇ ಸ್ಥಳದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ. ಡಾ.ಅಂಬೇಡ್ಕರ್ ಭವನದಲ್ಲಿ ವಿವಾಹ, ಸಮಾರಂಭ, ಸಭೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಕಾರ್ಯಕ್ರಮದಲ್ಲಿ ಮದ್ಯ, ಮಾಂಸ ಬಳಕೆ ಮಾಡಲಾಗುತ್ತದೆ. ಭವನದ ಮುಂಭಾಗ ಪ್ರತಿಮೆ ನಿರ್ಮಾಣ ಮಾಡಿದರೆ ಡಾ.ಅಂಬೇಡ್ಕರ್ ಅಪಮಾನ ಮಾಡಿದಂತಾಗುತ್ತದೆ ಎಂದರು. ಜಿಲ್ಲೆಯ 37 ದಲಿತ ಸಂಘಟನೆಗಳ ಮುಖಂಡರು ಹಲವು ಬಾರಿ ಸಭೆ ನಡೆಸಿ ಡಾ.ಅಂಬೇಡ್ಕರ್ ಭವನವನ್ನು ಸಮುದಾಯಕ್ಕೆ ಹಾಗೂ ಸಾರ್ವಜನಿಕ ಬಳಕೆಗೆ ಬಿಡಿಸಿಕೊಡಬೇಕೆಂದು ಹಲವು ಬಾರಿ ಮನವಿ ಮಾಡಿ ಹೋರಾಟವನ್ನು ಕೂಡ ನಡೆಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ಮಾ.19 ರಂದು ಮಡಿಕೇರಿಯ ಸುದರ್ಶನ ವೃತ್ತದ ಬಳಿ ಬೆಳಿಗ್ಗೆ 9.30 ಗಂಟೆಗೆ 2ನೇ ಬಾರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟಿ.ಎನ್.ಗೋವಿಂದಪ್ಪ ತಿಳಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಎಲ್.ದಿವಾಕರ್ ಮಾತನಾಡಿ, ಜಿಲ್ಲೆಯ ಇಬ್ಬರು ಶಾಸಕರುಗಳ ಗೆಲುವಿಗಾಗಿ ದಲಿತ ಸಂಘರ್ಷ ಸಮಿತಿ ಸಾಕಷ್ಟು ಶ್ರಮಿಸಿದೆ. ಆದರೆ ಡಾ.ಅಂಬೇಡ್ಕರ್ ಭವನದ ಗೊಂದಲ ನಿವಾರಣೆಗೆ ಶಾಸಕರುಗಳು ಯಾವುದೇ ಆಸಕ್ತಿ ತೋರುತ್ತಿಲ್ಲವೆಂದು ಟೀಕಿಸಿದರು. ಶಾಸಕರು ನಮ್ಮ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇದ್ದರೆ ಜಿಲ್ಲೆಯ ದಲಿತ ಸಂಘಟನೆಗಳು ಇವರುಗಳ ವಿಚಾರದಲ್ಲಿ ತಟಸ್ಥ ದೋರಣೆ ತಾಳಬೇಕಾಗುತ್ತದೆ ಎಂದು ತಿಳಿಸಿದರು. ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಬಿ.ರಾಜು ಮಾತನಾಡಿ, ಏಕಾಏಕಿ ಅಂಬೇಡ್ಕರ್ ಭವನದ ಮುಂಭಾಗ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದು ಖಂಡನೀಯ ಎಂದರು. ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಹೋರಾಟ ಸಮಿತಿಯ ಗೌರವ ಸಲಹೆಗಾರ ಎನ್.ವೀರಭದ್ರಯ್ಯ, ಉಪಾಧ್ಯಕ್ಷ ಡಿ.ಜೆ.ಈರಪ್ಪ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಹೆಚ್.ಕೆ.ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು.