

ಗುಂಡ್ಲುಪೇಟೆ NEWS DESK ಮಾ.18 : ಮದವೇರಿದ ಸಾಕಾನೆಯೊಂದು ಮಾವುತನ ಮೇಲೆ ದಾಳಿ ಮಾಡಲು ಯತ್ನಿಸಿ, ನಡು ರಸ್ತೆಯಲ್ಲೇ ಅಡ್ಡಾಡಿ ವಾಹನ ಚಾಲಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬಂಡೀಪುರದಲ್ಲಿ ನಡೆದಿದೆ. ರಾಂಪುರ ಸಾಕಾನೆ ಶಿಬಿರದ ರೋಹಿತ್ ನನ್ನು ವಿಶೇಷ ತರಬೇತಿಗಾಗಿ ಬಂಡೀಪುರಕ್ಕೆ ಕರೆ ತರಲಾಗಿತ್ತು. ಈ ಸಂದರ್ಭ ಮದವೇರಿದ ರೋಹಿತ್ ಮಾವುತ ವೆಂಕಟೇಶ್ ಮೇಲೆ ಮೊದಲು ದಾಳಿ ಮಾಡಲು ಯತ್ನಿಸಿದೆ. ಈ ಸಂದರ್ಭ ಸಣ್ಣಪುಟ್ಟ ಗಾಯಕ್ಕೊಳಗಾದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಯಾರ ನಿಯಂತ್ರಣಕ್ಕೂ ಬಾರದ ಕಾಡಾನೆ ನಡುರಸ್ತೆಯಲ್ಲೇ ಅಡ್ಡಾಡಿ ಆತಂಕ ಸೃಷ್ಟಿಸಿತು. ದ್ವಿಚಕ್ರ ವಾಹನ ಚಾಲಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯೂ ನಡೆಯಿತು. ರೋಹಿತ್ ಅರಣ್ಯಕ್ಕೆ ನುಸುಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ನಿಗಾ ವಹಿಸಿದ್ದಾರೆ.