



ಕೂಡಿಗೆ ಮಾ.19 NEWS DESK : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದಲ್ಲಿರುವ ಕುಂಬಾರ ಹಡ್ಲು ಗ್ರಾಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ, ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಗ್ರಾ.ಪಂ ಸದಸ್ಯ ಅನಂತ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂಬಾರ ಹಡ್ಲು ಗ್ರಾಮಸ್ಥರು ಗ್ರಾಮದ ಗುಳಿಗ ದೇವರ ಪೂಜೆಗೆ ಆಗಮಿಸಿ ಶಾಸಕರೊಂದಿಗೆ ಸಂವಾದ ನಡೆಸಿದರು. ಕುಂಬಾರ ಹಡ್ಲು ಗ್ರಾಮವು ಜೇನುಕಲ್ಲು ಮೀಸಲು ಅರಣ್ಯ ಪ್ರದೇಶದ ಸಮೀಪದಲ್ಲಿರುವ ಗ್ರಾಮವಾಗಿದ್ದು, ಕಾಡಾನೆಗಳಿಂದ ಅಪಾರ ಪ್ರಮಾಣದ ಬೆಳೆ ಹಾನಿ ಮತ್ತು ಸೀಗೆಹೊಸೂರು, ಕೂಡಿಗೆಯತ್ತಾ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಿರುಗಾಡಲು ಕಾಡಾನೆಗಳ ಹಾವಾಳಿಯಿಂದಾಗಿ ತೊಂದರೆಗಳು, ಭೂಮಿಯ ಹಕ್ಕುಪತ್ರ, ರಸ್ತೆ, ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಸೆಳೆದರು. ಗ್ರಾಮಸ್ಥರು ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರವನ್ನು ನೀಡಿದರು. ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ನವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಪ್ರಮುಖವಾಗಿ ಕಾಡಾನೆಗಳ ಹಾವಾಳಿ ಬಗ್ಗೆ ನೂತನವಾಗಿ ಎಲೆಕ್ಟ್ರಾನಿಕ್ ಡಿವೈಜ್ ಅಳವಡಿಸುವ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕುಶಾಲನಗರದ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕಾಂಗ್ರೆಸ್ ಮುಖಂಡರಾದ ನಾಪಂಡ ಮುತ್ತಪ್ಪ, ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆರ್.ಎಸ್.ಅರುಣ್ ರಾವ್, ಕಾಂಗ್ರೆಸ್ ವಲಯ ಅಧ್ಯಕ್ಷ ಅನಂತ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ಗ್ರಾಮದ ಅಧ್ಯಕ್ಷ ರಘು ಸೇರಿದಂತೆ ಕುಂಬಾರ ಹಡ್ಲು ಗ್ರಾಮ ನೂರಾರು ಗ್ರಾಮಸ್ಥರು ಹಾಜರಿದ್ದರು.
ವರದಿ : ಕೆ.ಕೆ.ನಾಗರಾಜಶೆಟ್ಟಿ.