


ಮಡಿಕೇರಿ ಮಾ.21 NEWS DESK : ದಕ್ಷಿಣ ವಲಯದ ಭೂಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಪಿವಿಎಸ್‍ಎಂ, ಎವಿಎಸ್‍ಎಂ ಅವರ ಉಪಸ್ಥಿತಿಯಲ್ಲಿ ನಿವೃತ್ತ ಸೈನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಬೃಹತ್ ಸಮಾವೇಶ ಮಾ.24 ರಂದು ನಗರದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ನಗರದ ಕ್ರಿಸ್ಟಲ್ ಕೋರ್ಟ್ ಸಂಭಾಂಗಣದಲ್ಲಿ ಸಮಾವೇಶ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ನಿವೃತ್ತ ಸೈನಿಕರು, ಅವರ ಅವಲಂಬಿತರು ಪಾಲ್ಗೊಳ್ಳಲಿದ್ದಾರೆ. ನೆರೆಯ ಕೇರಳ ವಿಭಾಗದ ಮಾಜಿ ಸೈನಿಕರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಹೇಳಿದರು. ಕಳೆದ ಸಾಲಿನಲ್ಲಿ ಗೋಣಿಕೊಪ್ಪಲಿನಲ್ಲಿ ಸಮಾವೇಶ ನಡೆದಿತ್ತು, ಈ ಬಾರಿ ಮಡಿಕೇರಿಯಲ್ಲಿ ನಡೆಯುತ್ತಿದೆ. ರಾಷ್ಟ್ರಕ್ಕೆ ಇಬ್ಬರು ಜನರಲ್‍ಗಳನ್ನು ಮತ್ತು ಅಸಂಖ್ಯ ವೀರಯೋಧರನ್ನು ನೀಡಿದ ಕೊಡಗಿನಲ್ಲಿ ಸೈನಿಕ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಭಾರತೀಯ ಸೈನ್ಯದ ದಕ್ಷಿಣ ಪ್ರಾಂತದ ಮುಖ್ಯಸ್ಥರು ಪ್ರತಿ ವರ್ಷ ಕೊಡಗಿನಲ್ಲಿ ಸಮಾವೇಶವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಕೊಡಗಿನಲ್ಲಿ ನೆಲೆಸಿರುವ ಮಾಜಿ ಯೋಧರು, ವೀರನಾರಿಯರು, ಮಾಸಿಕ ಪಿಂಚಣಿ, ಸೇವೆ ಸಲ್ಲಿಸಿದ ದಾಖಲೆಗಳಲ್ಲಿನ ಲೋಪ ದೋಷ, ಪಿಂಚಣಿ ಪಡೆಯುವಲ್ಲಿ ಹಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆ ಸಮಾವೇಶದ ಸಂದರ್ಭ ಸ್ಥಳದಲ್ಲೆ ಪರಿಹಾರ ದೊರಕುವ ವಿಶ್ವಾಸವಿದ್ದು, ಅದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಸಮಾವೇಶದಲ್ಲಿ ಕಲ್ಪಿಸಲಾಗುತ್ತಿದೆಯೆಂದು ವಿವರಿಸಿದರು. ಸಮಾವೇಶ ನಡೆಯುವ ಕ್ರಿಸ್ಟಲ್ ಕೊರ್ಟ್ ಸಭಾಂಗಣದಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರಿಗೆ, ಅವರವರ ವಿಭಾಗದಲ್ಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ, ಭಾರತೀಯ ಸೇನೆಯ 8 ವಿಭಾಗಗಳ ಅಧಿಕಾರಿಗಳು ಅಂದು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಯಿಂದಲೆ ಮಾಜಿ ಸೈನಿಕರು ತಮ್ಮ ತಮ್ಮ ವಿಭಾಗಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸ್ಥಳದಲ್ಲೆ ಸರಿಪಡಿಸಿಕೊಳ್ಳಬಹುದಾಗಿದೆ. ಎಂದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಮಾಸಿಕ ಪಿಂಚಣಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ‘ಸಿಸ್ಟಂ ಆಫ್ ಪೆನ್ಶನ್ ಅಡ್ಮಿನಿಸ್ಟ್ರೇಷನ್ ರಕ್ಷಾ’ ಎನ್ನುವ ಯೋಜನೆಯಡಿ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾವೇಶದಂದು ಸ್ಪರ್ಶ್ ಅಧಿಕಾರಿಗಳು ಮಾಜಿ ಸೈನಿಕರಿಗೆ ಲಭ್ಯರಿರುತ್ತಾರೆ. ಇವರ ಬಳಿ ತಮ್ಮ ಮಾಸಿಕ ಪಿಂಚಣಿಯ ಯಾವುದೇ ಸಮಸ್ಯೆ, ಗೊಂದಲಗಳಿಗೆ ಪರಿಹಾರವನ್ನು ಕಂಡು ಕೊಳ್ಳುವ ಅವಕಾಶವಿರುವುದಾಗಿ ಮೇಜರ್ ಚಿಂಗಪ್ಪ ತಿಳಿಸಿದರು. ಮಾಜಿ ಸೈನಿಕರಿಗಾಗಿ ಆಯೋಜಿತವಾಗಿರುವ ಈ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು, ವೀರ ನಾರಿಯರು, ಅವಲಂಭಿತರಲ್ಲದೆ ಸೈನ್ಯದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಭಾರತೀಯ ಭೂ ಸೇನಾ ದಕ್ಷಿಣ ವಲಯ(ಸದರ್ನ್ ಕಮಾಂಡ್)ದ ಸೇನಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಅವರು ಅಂದು ಬೆಳಗ್ಗೆ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕಕ್ಕೆ ಮೊದಲು ಭೇಟಿ ನೀಡಲಿದ್ದಾರೆ. ಬಳಿಕ ಬೆ.10 ಗಂಟೆಯ ನಂತರ ಸಮಾವೇಶದಲ್ಲಿ ಪಾಲ್ಗೊಂಡು ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭ ಸೈನ್ಯದ ಇತರೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಗೌರವ ಕಾರ್ಯದರ್ಶಿ ಸುಬೇದಾರ್ ಮೇಜರ್ ವಾಸಪ್ಪ ಅಗರಿಮನೆ(ನಿವೃತ್ತ), ನಿರ್ದೇಶಕರುಗಳಾದ ಹವಾಲ್ದಾರ್ ಕುಟ್ಟಂಡ ನಂದಾ ಮಾದಪ್ಪ(ನಿವೃತ್ತ), ಹವಾಲ್ದಾರ್ ಮಾದೆಯಂಡ ನಾಚಪ್ಪ(ನಿವೃತ್ತ), ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ(ನಿವೃತ್ತ) ಹಾಗೂ ಹವಾಲ್ದಾರ್ ಕೂಪದಿರ ಮುತ್ತಣ್ಣ(ನಿವೃತ್ತ) ಉಪಸ್ಥಿತರಿದ್ದರು.