




ಮಡಿಕೇರಿ ಏ.3 NEWS DESK : ಕಳೆದ ಎರಡು ಮೂರು ವರ್ಷಗಳಿಂದ ಜನರ ನಡುವೆ ಬೆರೆತು ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಜನರ ಪ್ರೀತಿಗಳಿಸಿದ ಸಾರ್ಥಕತೆ ತಮ್ಮ 28 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಪಡೆದಿರಲಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಮಡಿಕೇರಿಯ ಕಾವೇರಿ ಹಾಲ್ ಸಭಾಂಗಣದಲ್ಲಿ ಪ್ರೊಟೆಸ್ಟೆಂಟ್ ಸಭೆಗಳ ಸಂಘ ಏರ್ಪಡಿಸಿದ ಮೂರು ದಿನದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಹೈ ಕೋರ್ಟ್ ವಕೀಲನಾಗಿ, ಅಡ್ವೋಕೆಟ್ ಜನರಲ್ ಆಗಿ 28 ವರ್ಷಕಾಲ ತಾವು ನ್ಯಾಯಾಂಗ ಮತ್ತು ಕಾರ್ಯಾಂಗಳಲ್ಲಿ ಕೆಲಸ ಮಾಡಿದ್ದರೂ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡುವಾಗ ಸಿಗುವ ಸಂತೃಪ್ತಿ ತಮ್ಮ ವೃತ್ತಿ ಜೀವನದಲ್ಲಿ ಕಾಣಲಿಲ್ಲ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯರಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಪಾಲಿಸಲು ಎಲ್ಲರೂ ಬದ್ದರಾಗಿರಬೇಕು ಎಂದು ಕರೆ ನೀಡಿದ ಪೊನ್ನಣ್ಣನ, 1935 ರಲ್ಲಿ ಗವರ್ನಮೆಂಟ್ ಆಫ್ ಇಂಡಯಾ ಆ್ಯಕ್ಟ್ ಜಾರಿಯಾಗಿತ್ತು. ಅದರಲ್ಲಿ ಮೂಲಭೂತ ಹಕ್ಕನ್ನು ನೀಡಿರಲಿಲ್ಲ.ಸ್ವಾತಂತ್ರ್ಯ ನಂತರ ಅಂಬೇಡ್ಕರ್ ರವರು ವಿಶ್ವದ ಎಲ್ಲಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚಿಸಿ ಅದರಲ್ಲಿ ಆರ್ಟಿಕಲ್ 14 ರಲ್ಲಿ ಮೂಲಭೂತ ಹಕ್ಕನ್ನು ಅಳವಡಿಸಲಾಯಿತು ಎಂದು ವಿವರಿಸಿದರು. ನಮ್ಮ ಸಂವಿಧಾನವು ಸಮಾನತೆಯನ್ನು ಸರ್ವರಿಗೂ ನೀಡಿದ್ದು ಎಲ್ಲಾ ಧರ್ಮ,ಜಾತಿ,ಪಂಗಡದ ಜನರು ತಮ್ಮ ಧಾರ್ಮಿಕ ಆಚರಣೆಗಳು,ಪರಂಪರೆಗಳು,ಪದ್ದತಿಗಳನ್ನು ಶಾಂತಿಯುತವಾಗಿ ಆಚರಿಸುವ ಅಧಿಕಾರ ನೀಡಿದೆ.ಅದನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದರು. ತಾವು ಒಬ್ಬ ಕಾನೂನಿನ ವಿಧ್ಯಾರ್ಥಿಯಾಗಿ, ವಕೀಲನಾಗಿ ಶಾಸಕಾಂಗದ ಪ್ರತಿನಿಧಿಯಾಗಿ ಕೊನೆಯವರೆಗೂ ಸಂವಿಧಾನದ ಆಶಯಗಳಿಗೆ ಬದ್ದನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು. ಏಳು ಪ್ರಕಾಶಿಸು ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭೋಧಕರಾದ ಡಾ.ರೆವರೆಂಡ್ ರವಿಮಣಿ, ಸಂಸ್ಥೆಯ ಮುಖ್ಯಸ್ಥರಾದ ಕುಮಾರ್ ಮಹಾದೇವ್,ರಾಜೇಶ್,ಫಿಲೋಮಿನ ರಾಜ್,ಬೆನೆಡಿಕ್ಟ್, ಸುನೀಲ್,ಅರ್.ನವೀನ್,ಸ್ಟೆನ್ಸನ್,ಟೈಟಸ್, ಸಿದ್ದು, ಪಾಕಾ, ಬ್ರದರ್ ಎಡ್ವಿನ್ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಆಗಮಿಸಿದ ಸಾವಿರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.