




ಮಡಿಕೇರಿ ಏ.5 NEWS DESK : ಕೊಡಗು ಜಿಲ್ಲಾ ಕುಲಾಲ(ಕುಂಬಾರ) ಸಂಘದ ವತಿಯಿಂದ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕ ಸಹಯೋಗದೊಂದಿಗೆ ಏ.26 ಮತ್ತು 27 ರಂದು ಮಡಿಕೇರಿಯಲ್ಲಿ ಸಮಾಜ ಬಾಂಧವರ ಸಮ್ಮಿಲನ ಮತ್ತು ಕ್ರೀಡೋತ್ಸವ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬಾರ ಬಾಂಧವರ ಸಂಘಟನೆಗಾಗಿ ಪ್ರಪ್ರಥಮ ಬಾರಿಗೆ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 1000ಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಏ.26 ರಂದು ನಗರದ ಮ್ಯಾನ್ಸ್ ಕಾಂಪೌಡ್‍ನ ಕೆಳಗಿನ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಕ್ರೀಡೋತ್ಸವಕ್ಕೆ ಗಣ್ಯರು ಚಾಲನೆ ನೀಡಲಿದ್ದಾರೆ. ಏ.27ರಂದು ಸಂಜೆ 4 ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಮುತ್ತಮ್ಮ ಕೋಟಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‍ಗೌಡ, ಎಂಎಲ್‍ಸಿ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಚಲಚಿತ್ರ ನಟರಾದ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ, ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾದೀಶೆ ರೇಣುಕಾಂಬ, ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಪಿ.ಹರ್ಷ, ಸಂಘದ ಉಪಾಧ್ಯಕ್ಷ ಕೆ.ಕೆ.ದಾಮೋದರ್, ಪ್ರಮುಖರಾದ ಮಯೂರ್ ಉಳ್ಳಾಲ್, ಡಾ.ಮಂಜಪ್ಪ ಶರಣರು, ಕೆ.ಎಂ.ಚಿನ್ನಪ್ಪ, ಎಂ.ಡಿ.ನಾಣಯ್ಯ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಬಿ.ವಿ.ಅರುಣ್ ಕುಮಾರ್ ಮಾತನಾಡಿ, ಪುರುಷರಿಗೆ ಏ.26 ರಂದು 6 ಓವರ್‍ನ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಮಾತ್ರ ನಡೆಯಲಿದೆ. ಈಗಾಗಲೇ 10 ತಂಡಗಳು ನೋಂದಾಣಿ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದ ಅವರು, ಉಳಿದಂತೆ ಪುರುಷರ ವಿಭಾಗದಲ್ಲಿ ಏ.27 ರಂದು ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಗೋಣಿಚೀಲ ಓಟ, ಮೂರು ಕಾಲಿನ ಓಟ, 100, 200 ಮೀಟರ್ ಓಟ, ವೇಗದ ನಡಿಗೆ, ಬಾಲ್ ಪಾಸಿಂಗ್ ಸ್ಪರ್ಧೆ ನಡೆಯಲಿದೆ. ಮಹಿಳೆಯರ ವಿಭಾಗದಲ್ಲಿ ರಂಗೋಲಿ, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬಾಂಬ್ ಇನ್ ದ ಸಿಟಿ, ನಿಂಬೆ ಚಮಚ, ಸೂಜಿಗೆ ದಾರ ಓಟ ಸೇರಿದಂತೆ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಉಪಾಧ್ಯಕ್ಷ ಕೆ.ಕೆ.ದಾಮೋದರ್ ಮಾತನಾಡಿ, ಕುಂಬಾರ ಕುಲಾಲ ಸಮುದಾಯವು ವೃತ್ತಿ ಮತ್ತು ಸಾಮಾಜಿಕ ಸೇವೆಗಳಲ್ಲಿ ಮಹತ್ತರ ಪಾತ್ರ ವಹಿಸಿದೆ. ಸಮುದಾಯವು ಪುರಾತನ ಕಾಲದಿಂದಲೂ ಕುಂಭಕಲೆಯ ಜತೆಗೆ ಜೀವನ ಸಾಗಿಸಿದ್ದು, ರಾಜಮನೆತನಗಳ ಅವಧಿಯಲ್ಲಿ ತಮ್ಮ ವೃತ್ತಿಗೆ ವಿಶೇಷ ಗೌರವ ಪಡೆದಿದೆ. ಇಂದು ಸಮುದಾಯವು ಪ್ರಾಚೀನ ವೃತ್ತಿಯನ್ನು ಉಳಿಸಿಕೊಳ್ಳುವುದರ ಜತೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೊಸ ಚಿಂತನೆ ತೋರಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಕೆ.ಎಸ್.ಗಿರೀಶ್, ಮಡಿಕೇರಿ ತಾಲ್ಲೂಕು ಘಟಕದ ಸದಸ್ಯ ಎಂ.ಡಿ.ಸುರೇಶ್, ಮಹಿಳಾ ಘಟಕದ ಸದಸ್ಯೆ ಆಶಾ ದೇವಪ್ಪ ಉಪಸ್ಥಿತರಿದ್ದರು.