




ಮಡಿಕೇರಿ NEWS DESK ಏ.6 : ಕೊಡಗಿನ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರ ವರ್ಚಸ್ಸನ್ನು ತಗ್ಗಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಇದರ ಬಿಜೆಪಿ ಮುಖಂಡರುಗಳು ಇದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇಂಧನ ದರ ಹೆಚ್ಚಳದ ಸಂದರ್ಭ ರಾಜ್ಯದ ಮತ್ತೆಲ್ಲೂ ನಡೆಯದ ಶಾಸಕರ ಪ್ರತಿಕೃತಿ ದಹನ ವಿರಾಜಪೇಟೆಯಲ್ಲಿ ನಡೆಯಿತು. ನಾಪೋಕ್ಲುವಿನ ಶೌಚಾಲಯ ಒಂದಕ್ಕೆ ಶಾಸಕ ಪೊನ್ನಣ್ಣ ಅವರ ಭಾವಚಿತ್ರ ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅವಮಾನಿಸುವ ಪ್ರಯತ್ನ ನಡೆಯಿತು. ನಿರಂತರವಾಗಿ ಶಾಸಕರುಗಳ ವಿರುದ್ಧ ಅಪಪ್ರಚಾರ ಮಾಡುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ರಸ್ತೆಗಿಳಿದಿರುವ ಜಿಲ್ಲೆಯ ಮಾಜಿ ಶಾಸಕರು, ವಿನಯ್ ಬದುಕಿದ್ದಾಗಲೇ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತೆಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಜಿಲ್ಲೆಯ ಇಬ್ಬರು ಶಾಸಕರ ಆಡಳಿತದಲ್ಲಿನ ಲೋಪಗಳಿದ್ದಲ್ಲಿ ಅದನ್ನು ಪ್ರಶ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ. ಪ್ರಸ್ತುತ ಬಿಜೆಪಿಯು ವಿನಯ್ ಸೋಮಯ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಪ್ರಸ್ತುತ ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದೆ. ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಶಾಸಕರ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆಯೆಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಉಪಾಧ್ಯಕ್ಷ ವಿ.ಜಿ.ಮೋಹನ್ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ನ ಪೆಮ್ಮಂಡ ಮಂಜು ಬೋಪಣ್ಣ ಉಪಸ್ಥಿತರಿದ್ದರು.