





ಮಡಿಕೇರಿ ಏ.7 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕಾರ್ಯಕರ್ತ ವಿನಯ್ ಸಾಯುವ ಮೊದಲು ಉಲ್ಲೇಖಿಸಿರುವ ಎಲ್ಲಾ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಪ್ರಕರಣದಲ್ಲಿ ಶಾಸಕರನ್ನು ಗುರಿಮಾಡಿ ಪ್ರಕರಣ ದಾಖಲಿಸಬೇಕೆಂದು ನಾವು ಹೇಳುತ್ತಿಲ್ಲ. ಎಲ್ಲರಿಗೂ ಕಾನೂನು ಒಂದೇ ಆಗಿರುವುದರಿಂದ ಡೆತ್ ನೋಟ್ ನಲ್ಲಿರುವ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು. ಪ್ರಕರಣದ ಪ್ರಮುಖ ವ್ಯಕ್ತಿಯ ಬಂಧನ ಇನ್ನೂ ಕೂಡ ಆಗಿಲ್ಲ, ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ಸಂವಿಧಾನ ಬದ್ಧವಾಗಿ ಕರ್ತವ್ಯ ನಿಭಾಯಿಸಲು ಬಿಡುತ್ತಿಲ್ಲವೆಂದು ಆರೋಪಿಸಿದರು. ವಿನಯ್ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಏ.9 ರಂದು ಮಡಿಕೇರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಚೌಡೇಶ್ವರಿ ದೇವಾಲಯದಿಂದ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಸಾಗಲಿದೆ. ನಂತರ ಪ್ರತಿಭಟನಾ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ರಾಜ್ಯದ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಭಾನುವಾರ ಮಡಿಕೇರಿಯಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹಿಸಿದೆ. ಪ್ರತಿಕೃತಿ ದಹಿಸಿದ ಎಷ್ಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ರವಿ ಕಾಳಪ್ಪ ಪ್ರಶ್ನಿಸಿದರು. ಈ ಹಿಂದೆ ವಿರಾಜಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದಾಗ ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಕಾರಣಕ್ಕಾಗಿ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು 30 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರ ದೃಷ್ಟಿಯಲ್ಲಿ ವಿರಾಜಪೇಟೆಗೆ ಒಂದು ಕಾನೂನು, ಮಡಿಕೇರಿಗೆ ಒಂದು ಕಾನೂನು ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
::: ಸಂಭ್ರಮಾಚರಣೆ ::: ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಕಾಂಗ್ರೆಸ್ಸಿಗರು ಭಾನುವಾರ ಮಾಡಿರುವುದು ಪ್ರತಿಭಟನೆಯಲ್ಲ, ಅದೊಂದು ಸಂಭ್ರಮಾಚರಣೆ ಎಂದು ಟೀಕಿಸಿದರು. ಶಾಸಕರಾದವರು ಹೊಗಳಿಕೆ ಮತ್ತು ಟೀಕೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕೇ ಹೊರತು ವೈಯುಕ್ತಿಕ ದ್ವೇಷ ಬೆಳೆಸಬಾರದು ಎಂದರು. ವಾಟ್ಸಪ್ ಗ್ರೂಪ್‍ನಲ್ಲಿ ಅಡ್ಮಿನ್ ಆಗಿದ್ದ ವಿನಯ್ ಅವರ ವಿಚಾರದಲ್ಲಿ ಎಫ್‍ಐಆರ್ ದಾಖಲಿಸಿದ ಪೊಲೀಸರು, ನಿಯಮವನ್ನು ಗಾಳಿಗೆ ತೂರಿದ್ದಾರೆ. ಇದರಿಂದ ವಿನಯ್ ಮಾನಸಿಕ ಕಿರುಕುಳ ಅನುಭವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು. ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಪ್ರಕರಣ ದಾಖಲಾಗುತ್ತಿಲ್ಲ. ಆದರೆ ಅಭಿವೃದ್ಧಿಪರ ಚಿಂತನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಗಳನ್ನು ಪ್ರತಿಬಿಂಬಿಸುವವರ ವಿರುದ್ಧ ಪ್ರಕರಣ ದಾಖಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿನಯ್ ಸಾವಿನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರದ ಪ್ರತಿನಿಧಿಗಳು ಯುಡಿಆರ್ ಹಾಕಿ ಎಂದು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಕೆ.ಜಿ.ಬೋಪಯ್ಯ ಅವರು, ಅಮಾಯಕ ವಿನಯ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಕಳೆದ 20 ವರ್ಷಗಳ ಕಾಲ ನಾವೂ ಶಾಸಕರಾಗಿದ್ದೆವು, ಈ ಅವಧಿಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಕೂಡ ಶಾಸಕರಿಂದ ಕಿರುಕುಳ ಆಗಿದೆ ಎಂದು ಹೇಳಿಕೊಂಡಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸೌಹಾರ್ದತೆಯನ್ನು ಮರೆತು ದರ್ಪ ಮೆರೆಯುತ್ತಿದೆ, ಸರ್ಕಾರದ ದಬ್ಬಾಳಿಕೆಯನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಹೋರಾಟದ ಮೂಲಕ ಬಿಜೆಪಿ ವಿನಯ್ ಸಾವಿಗೆ ನ್ಯಾಯ ಒದಗಿಸಲಿದೆ. ಪ್ರಕರಣದ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವ ಶಾಸಕರು ಮೊದಲು ಕಾನೂನನ್ನು ಸರಿಯಾಗಿ ಓದಿ ತಿಳಿದುಕೊಳ್ಳಲಿ ಎಂದರು. ಪ್ರಚಾರಕ್ಕಾಗಿ ಶಾಸಕರು ವಿದ್ಯುತ್ ಕಂಬ ಅಳವಡಿಸುವುದಕ್ಕೂಬ ಪೂಜೆ ನೆರವೇರಿಸುತ್ತಿದ್ದಾರೆ ಎಂದು ಬೋಪಯ್ಯ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರಾದ ಬಿ.ಕೆ.ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್ ಹಾಗೂ ಮಾದ್ಯಮ ವಕ್ತಾರ ಶಜಿಲ್ ಕೃಷ್ಣನ್ ಉಪಸ್ಥಿತರಿದ್ದರು.