






ಮಡಿಕೇರಿ ಏ.7 NEWS DESK : ದೇಶದ ಸಂಸತ್ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಏ.9ರಂದು ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಬೆಳಿಗ್ಗೆ 10.30 ಗಂಟೆಗೆ ಕಡಂಗ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಶಾಂತಿಯುತವಾಗಿ ಮಂಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಲಾಗುವುದು. ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72ರಿಂದ 1931ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ್ದಾರೆ. ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಸಂಸತ್ ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದ್ದಾರೆ. ವಿಶಿಷ್ಟ ಜನಾಂಗೀಯ ಗುಂಪಾದ ಕೊಡವರ ಸೂಕ್ತ ಸ್ಥಾನವನ್ನು ಕಸಿದುಕೊಂಡ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕು. ಕೊಡವರನ್ನು ಮೂಲ ವಂಶಸ್ಥ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿದ ಏಕ ಮತ್ತು ವಿಭಿನ್ನ ಜನಾಂಗೀಯ ಗುಂಪು ಎಂದು ಗುರುತಿಸಬೇಕು. ಕೊಡವರಿಗೆ ಸಂಬಂಧಿಸಿದಂತೆ ಜಾತಿಯ ಯಾವುದೇ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಲಾಗುವುದು.
ಕೊಡವ ಜನಾಂಗವು ಒಂದೇ ಜನಾಂಗ. ಕೊಡವ ಸಮುದಾಯದಲ್ಲಿ ಯಾವುದೇ ಷರತ್ತು, ಉಪ-ಷರತ್ತು, ಉಪ-ಪಂಗಡ ಅಥವಾ ಉಪ-ಜಾತಿ ಇಲ್ಲ. ನಾವು ಕೊಡವ ಜನಾಂಗದವರು ಮತ್ತು ನಮ್ಮ ತಾಯಿ ಬೇರುಗಳು ಕೊಡವಲ್ಯಾಂಡ್ ಗೆ ಮಾತ್ರ ಸೀಮಿತವಾಗಿವೆ. ಕೊಡವಲ್ಯಾಂಡ್ ನ ಹೊರಗೆ, ನಮ್ಮ ಯಾವುದೇ ಸಾಂಸ್ಕøತಿಕ ಬೇರುಗಳಿಲ್ಲ. ಪ್ರಾಚೀನ ಕಾಲದಿಂದ ಇಂದಿನವರೆಗೆ, ನಾವು ಒಂದು ಜನಾಂಗವಾಗಿ ನಮ್ಮ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದ್ದೇವೆ. ಕೊಡವರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, 1941-2011 ರ ಜನಗಣತಿ ಎಣಿಕೆಗಳನ್ನು ರದ್ದುಗೊಳಿಸಲು ಮತ್ತು 1871-72 ರಿಂದ 1931 ರ ಜನಗಣತಿ ಎಣಿಕೆಗಳಲ್ಲಿ ಪ್ರತಿಫಲಿಸಿದಂತೆ ಕೊಡವ ಸಮುದಾಯದ ಅಧಿಕೃತ ಪ್ರಾತಿನಿಧ್ಯವನ್ನು ಪುನಃಸ್ಥಾಪಿಸಲು ಸಿಎನ್ಸಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.