






ಕುಶಾಲನಗರ ಜ.8 NWES DESK : ಡಾ.ಅಂಬೇಡ್ಕರ್ ಅವರ ಜನ್ಮದಿನವನ್ನು ಮನೆ ಮನದ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹೆಚ್.ಬಿ.ಗಣೇಶ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಏಪ್ರಿಲ್ 14 ಇಡೀ ವಿಶ್ವವೇ ಸಂಭ್ರಮಿಸುವ ದಿನವಾಗಿದ್ದು, ಅಂಬೇಡ್ಕರ್ ಅವರ ಸಾಧನೆಗಳನ್ನು ಸ್ಮರಿಸಿ ಯುವ ಜನಾಂಗಕ್ಕೆ ಸಮಗ್ರ ಮಾಹಿತಿ ಒದಗಿಸುವ ದಿನವಾಗಿದೆ ಎಂದು ಹೇಳಿದರು. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ ಸಂಭ್ರಮಿಸಿ ಅವರ ಆಶಯದ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪಣತೊಡಬೇಕಾಗಿದೆ ವಿಶೇಷವಾಗಿ ಭಾರತ ದೇಶದ ಶೋಷಿತ ಜನ ಅವರನ್ನು ನೆನೆಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಣೆಯಲ್ಲಿ ತೊಡಗಬೇಕಾಗಿದೆ ಎಂದರು. ಈ ಸಂಬಂಧ ಈಗಾಗಲೇ ಸಂಘದ ವತಿಯಿಂದ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು. ದಲಿತ ಮುಖಂಡರು ಮತ್ತು ಸಂಘದ ಪ್ರಮುಖರಾದ ಕೆ.ಬಿ.ರಾಜು ಮಾತನಾಡಿ, ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರತಿ ಗ್ರಾಮ ಗ್ರಾಮಗಳಲ್ಲಿ ಅದ್ದೂರಿಯಾಗಿ ಆಚರಣೆಯಾಗಬೇಕು. ಆ ದಿನವನ್ನು ಮಧ್ಯಪಾನ ಮುಕ್ತ ದಿನವನ್ನಾಗಿ ಸರ್ಕಾರ ಘೋಷಿಸಬೇಕು. ಕಾರ್ಯಕ್ರಮಗಳು ಜಾತಿಗಳಿಗೆ ಸೀಮಿತವಾಗದೆ ವಿವಿಧ ಕಾರ್ಯಕ್ರಮಗಳೊಂದಿಗೆ ಪ್ರತಿಯೊಬ್ಬರೂ ಸಂಭ್ರಮಿಸುವಂತಾಗಬೇಕು ಎಂದರು. ಸಂಘದ ನಿರ್ದೇಶಕರಾದ ಹೆಚ್.ಡಿ.ಚಂದ್ರು ಮಾತನಾಡಿ, ಸರಕಾರಿ ಕಾರ್ಯಕ್ರಮಗಳ ಹೊರತಾಗಿ ತಾಲೂಕಿನಾದ್ಯಂತ ಎಲ್ಲಾ ಜನರು ಒಟ್ಟಿಗೆ ಸೇರಿ ಸಂಘ ಸಂಸ್ಥೆಗಳು ಅಂದು ಮನೆಮನ ಹಬ್ಬ ಯಶಸ್ವಿಗೊಳಿಸುವಂತೆ ಕೋರಿದರು. ಇದೇ ವೇಳೆ ಅಂಬೇಡ್ಕರ್ ಹುಟ್ಟುಹಬ್ಬ ಸಲುವಾಗಿ ಪ್ರಕಟಿಸಿದ ಮನೆ ಮನದ ಹಬ್ಬ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಕೆಎಸ್ ರವಿ, ಎಸ್ ಎಸ್ ಸಂಗಮೇಶ್ ಇದ್ದರು.








