






ಮಡಿಕೇರಿ ಏ.8 NEWS DESK : ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಬೆಳ್ಳಿಹಬ್ಬದ ಸಂಭ್ರಮದ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಪರಿಸರ ಜಾಗೃತಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಕಿ ಉತ್ಸವ ನಡೆಯುತ್ತಿರುವ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 2 ಟನ್ ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ. ಶೂನ್ಯ ತ್ಯಾಜ್ಯ ನಿರ್ವಹಣೆಗೆ ಬೆಂಗಳೂರಿನ ವೇದನ್ ಟ್ರಸ್ಟ್ ಕೈಜೋಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ನಮ್ಮ ವಿನೂತನ ಪ್ರಯತ್ನ ಇಡೀ ಜಿಲ್ಲೆಗೆ ಮಾದರಿಯಾಗಲಿದೆ. ಜನರಲ್ಲಿ ಪರಿಸರದ ಕುರಿತು ಕಾಳಜಿ ಮೂಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಮುದ್ದಂಡ ಹಾಕಿ ಉತ್ಸವ ಆರಂಭಗೊಂಡು 10 ದಿನಗಳೇ ಕಳೆದಿದ್ದು, ಈ ಅವಧಿಯಲ್ಲಿ ವೇದನ್ ಟ್ರಸ್ಟ್ ನ ಸ್ವಯಂ ಸೇವಕರ ಮೂಲಕ 2 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಇದರಿಂದ ಪ್ರಕೃತಿಗೆ ನಾಲ್ಕು ಮರಗಳನ್ನು ಉಳಿಸಿದಷ್ಟು ಲಾಭವಾಗಿದೆ. ಹಾಕಿ ಉತ್ಸವ ಮುಗಿಯುವ ವೇಳೆಗೆ ಸುಮಾರು 10 ಟನ್ ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆ ಇದೆ. ನಮ್ಮ ಈ ಪ್ರಯತ್ನದಿಂದ ಪರಿಸರಕ್ಕೆ ಸೇರುತ್ತಿದ್ದ ಇಂಗಾಲವು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು ಎನ್ನುವ ಕುರಿತು ಸಂಪೂರ್ಣ ವರದಿಯನ್ನು ಉತ್ಸವ ಮುಗಿದ ನಂತರ ನೀಡುವುದಾಗಿ ತಿಳಿಸಿದರು. ಬೆಂಗಳೂರಿನ ವೇದನ್ ಟ್ರಸ್ಟ್ ನ ಸದಸ್ಯರು ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇವರ ಈ ವೈಜ್ಞಾನಿಕ ರೂಪದ ಕಾರ್ಯನಿರ್ವಹಣೆಯನ್ನು ಮಡಿಕೇರಿ ನಗರಸಭೆಯೂ ಅಳವಡಿಸಿಕೊಳ್ಳಬಹುದು ಎಂದು ರಶಿನ್ ಸುಬ್ಬಯ್ಯ ಅಭಿಪ್ರಾಯಪಟ್ಟರು. ವೇದನ್ ಟ್ರಸ್ಟ್ ನ ಪ್ರಮುಖ ಎಸ್.ಸಿ.ಗಣೇಶ್ ಮಾತನಾಡಿ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆಯಲ್ಲಿ ಸ್ವಚ್ಛ ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಮುದ್ದಂಡ ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ಎಂದರು. ಏಕ ಬಳಕೆಯ ವಸ್ತುಗಳನ್ನು ಬಳಸದೆ ಇರುವುದು ಮತ್ತು ಕಡಿಮೆ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಹಾಕಲು ಚೀಲ ಹಾಗೂ ಡ್ರಮ್ ಗಳನ್ನು ಇಡಲಾಗಿದೆ. ಇದರಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮತ್ತು ನಿರ್ವಹಣೆಯನ್ನು ಮಾಡುತ್ತೇವೆ. ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲಿ, ಕಾಗದದ ತಟ್ಟೆ, ಲೋಟ, ಹರಿದ ಕಾಗದ, ಬಣ್ಣದ ಕಾಗದ, ಹಾಲಿನ ಪ್ಯಾಕೆಟ್, ಟೆಟ್ರಾ ಪ್ಯಾಕೆಟ್, ರಟ್ಟು, ಗಟ್ಟಿ ಪ್ಲಾಸ್ಟಿಕ್, ಸ್ಟ್ರಾಗಳು, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕವರ್ ಮತ್ತು ಎಂಎಲ್‍ಪಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಮರುಬಳಕೆಗೆ ಕಳುಹಿಸುತ್ತೇವೆ. ಈ ಶೂನ್ಯ ತ್ಯಾಜ್ಯ ನಿರ್ವಹಣೆಯ ಪರಿಕಲ್ಪನೆ ಮೂಲಕ ಹಾಕಿ ಪ್ರಿಯರಿಗೂ ಪರಿಸರ ಕಾಳಜಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಪ್ರತಿ ವರ್ಷ ನಡೆಯುವ ಹಾಕಿ ಉತ್ಸವದಲ್ಲಿ ಇದೇ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕೆನ್ನುವ ಆಶಯವನ್ನು ನಾವು ಹೊಂದಿದ್ದೇವೆ. ವೇದನ್ ಟ್ರಸ್ಟ್ ಮೂಡಬಿದಿರೆಯ ಕಂಬಳ ಮತ್ತು ಗಣೇಶೋತ್ಸವವನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮವನ್ನಾಗಿ ಮಾಡಿ ಯಶಸ್ವಿಯಾಗಿದೆ. ಬೆಂಗಳೂರಿನ ಶಾಲಾ, ಕಾಲೇಜು ಮತ್ತು ಕಛೇರಿಗಳನ್ನು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುತ್ತಿದೆ. ಈ ಉತ್ತಮ ಕಾರ್ಯವು ಮಡಿಕೇರಿಯಲ್ಲಿಯೂ ಮುಂದುವರೆಯುತ್ತಿದೆ. ಶೂನ್ಯ ತ್ಯಾಜ್ಯ ಕಾರ್ಯಕ್ರಮ ಯಾಕೆ ಮಾಡಬೇಕು, ಮಾಡಿದರೆ ಏನೆಲ್ಲಾ ಪ್ರಯೋಜನಗಳಾಗುತ್ತವೆ, ಇದರಿಂದ ಪ್ರಕೃತಿಗೆ ಎಷ್ಟು ಲಾಭವಿದೆ, ಎಷ್ಟು ಮರಗಳನ್ನು ಉಳಿಸಿದೆವು ಹಾಗೂ ಪರಿಸರಕ್ಕೆ ಸೇರುತ್ತಿದ್ದ ಇಂಗಾಲವು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು ಎಂಬೆಲ್ಲ ಅಂಕಿ ಅಂಶಗಳ ವರದಿಯನ್ನು ಹಾಕಿ ಉತ್ಸವ ಮುಗಿದ ನಂತರ ನೀಡಲಾಗುವುದು ಎಂದು ಎಸ್.ಸಿ.ಗಣೇಶ್ ತಿಳಿಸಿದರು. ಮುದ್ದಂಡ ಕಪ್ ಹಾಕಿ ಉತ್ಸವದ ಕಾರ್ಯದರ್ಶಿ ಆದ್ಯ ಪೊವಣ್ಣ ಮಾತನಾಡಿ ನಮ್ಮ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ದೊಡ್ಡ ಕ್ರೀಡೋತ್ಸವ ಮತ್ತು ಸಮಾರಂಭಗಳಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪ್ರೇರಣೆಯನ್ನು ನೀಡಿದೆ. ಈಗಾಗಲೇ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರೊಂದಿಗೆ ವೇದನ್ ಟ್ರಸ್ಟ್ ನಿಂದ ಮಾತುಕತೆ ನಡೆದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಉಪಾಧ್ಯಕ್ಷ ಡೀನ್ ಬೋಪಣ್ಣ ಉಪಸ್ಥಿತರಿದ್ದರು.