ವಿರಾಜಪೇಟೆ ಏ.21 NEWS DESK : ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ನಲ್ಲಿ ಈಸ್ಟರ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶುಕ್ರವಾರದಂದು ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಆಚರಣೆಗಳು ಹಾಗೂ ಸಾಂಗ್ಯ ದ ಆಚರಣೆಗಳ ಮೂಲಕ ಪ್ರಭು ಯೇಸು ಕ್ರಿಸ್ತರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿಲುಬೆಗೆ ಭಕ್ತರು ನಮಿಸಿ ಗೌರವಿಸಿದರು. ರಾತ್ರಿ ಚರ್ಚ್ ನಲ್ಲಿ ವಿಶೇಷ ಪೂಜೆ ನಡೆಯಿತು. ದೇವರ ಪುನಃರುತನದ ಸಂಕೇತವಾದ ಈಸ್ಟರ್ ಸಂಡೆ ಹಬ್ಬದ ಪ್ರಯುಕ್ತ ಬೆಳಿಗ್ಗೆ ವಿಶೇಷ ಬಲಿಪೂಜೆಯನ್ನು ನಡೆಸಲಾಯಿತು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ಧರ್ಮಗುರುಗಳು ಆಶೀರ್ವಚನ ನೀಡಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಮತ್ತೋರ್ವ ಧರ್ಮಗುರುಗಳು ಹಾಗೂ ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಪ್ರಾರ್ಥಿಸಿ ತ್ಯಾಗ, ಬಲಿದಾನದ ಹಬ್ಬ ಇದಾಗಿದ್ದು, ಪ್ರಭು ಯೇಸು ಕ್ರಿಸ್ತರು ಮನುಕುಲದ ಉದ್ದಾರಕ್ಕೆ ಜನಿಸಿದರು ಎಂದರು. ನಾಡಿಗೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಫಾ. ಸಂತೋಷ್ ಡಯಾಸ್ ಕನ್ಯಾ ಸ್ತ್ರೀಯರು, ಚರ್ಚ್ ಸಮಿತಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.











