
ಮಡಿಕೇರಿ ಮೇ 12 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಪಾರಾಣೆಯಲ್ಲಿ, ಮೂರ್ನಾಡು-ಬಲಮುರಿ -ಪಾರಾಣೆ-ನಾಪೋಕ್ಲು ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಸುಮಾರು 2.75 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗೆ ಪಾರಣೆಯ ನಾಯಕಂಡ ಮನೆಯ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅತಿ ಮುಖ್ಯ ಎಂದು ಹೇಳಿದರು. ಸಾರ್ವಜನಿಕರ ಅನುಕೂಲಕ್ಕಾಗಿ ತಾನು ಈ ರಸ್ತೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳಲ್ಲಿ ವಿಶೇಷ ಅನುದಾನವನ್ನು ತಂದಿದ್ದು, ಇದರ ಸಂಪೂರ್ಣ ಸದುಪಯೋಗ ಈ ಭಾಗದ ಸಾರ್ವಜನಿಕರಿಗೆ ಹಾಗೂ ರಸ್ತೆಯನ್ನು ಬಳಿಸುವ ಎಲ್ಲಾ ಬಳಕೆದಾರರಿಗೆ ಲಭಿಸುವಂತಾಗಬೇಕು ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಶೇಷ ಗಮನಹರಿಸಬೇಕೆಂದು ತಾಕೀತು ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕಾಂಗ್ರೆಸ್ ಮುಖಂಡರು, ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಹಾಜರಿದ್ದರು.









