
ಮಡಿಕೇರಿ ಮೇ 17 NEWS DESK : ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು, ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಮಾಯಮುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಕರೆ ನೀಡಿದ್ದಾರೆ. ಮಾಯಮುಡಿಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಸ್ವಾಲಂಬಿಗಳಾಗಿ ಜೀವನ ಸಾಗಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ತಯಾರಿಸುವ ಉತ್ಪನ್ನಗಳಿಗೆ ಗ್ರಾ.ಪಂ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು. ದಿನನಿತ್ಯ ಬೇಡಿಕೆ ಇರುವ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ತಾವು ತಯಾರಿಸಿದ ವಸ್ತುಗಳಿಗೆ ಸೂಕ್ತ ಬೆಲೆ ಸಿಗಬೇಕಾದರೆ ಗ್ರಾಮ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಮಾರುಕಟ್ಟೆ ವ್ಯವಸ್ಥೆ ಲಭಿಸಬೇಕು. ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗೆ ಸ್ವಂತ ಉದ್ದಿಮೆ ಸ್ಥಾಪಿಸಲು ವಿವಿಧ ರೀತಿಯ ಸಹಾಯಧನದ ರೂಪದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜೇನು ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಹಸುವಿನ ಕೊಟ್ಟಿಗೆ ನಿರ್ಮಾಣ ಮಾಡಲು ಗ್ರಾ.ಪಂ ಮೂಲಕ ಸಹಾಯಧನ ನೀಡಲಾಗುತ್ತಿದ್ದು, ಮಹಿಳೆಯರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಟಾಟು ಮೊಣ್ಣಪ್ಪ ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟೀರ ಎ.ಬೋಪಣ್ಣ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಪಿ.ಎ.ಮಲ್ಲಿಗೆ, ಕಾರ್ಯದರ್ಶಿ ಟಿ.ಪಾರ್ವತಿ, ಗ್ರಾ.ಪಂ ಸದಸ್ಯರಾದ ಪೊನ್ನಿಮಾಡ ಸರಸ್ವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಎನ್‍ಆರ್‍ಎಲ್‍ಎಂ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್, ತಾಲ್ಲೂಕು ವ್ಯವಸ್ಥಾಪಕ ಮಂಜುನಾಥ್, ಕೃಷಿಯೇತರ ಎನ್‍ಆರ್‍ಎಲ್‍ಎಂ ನ ತಾಲ್ಲೂಕು ವ್ಯವಸ್ಥಾಪಕರಾದ ಧನ್ಯ ಸೇರಿದಂತೆ ವಿವಿಧ ಮಹಿಳಾ ಸಂಘಟನೆಯ ಪ್ರಮುಖರು ಹಾಜರಿದ್ದರು.










