ಮಡಿಕೇರಿ ಮೇ 19 NEWS DESK : ಕೊಡಗು ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳಲ್ಲಿ 2025-26ನೇ ಸಾಲಿನಲ್ಲಿ ವಿವಿಧ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಜಿಲ್ಲೆಯ ಮತ್ತು ನೆರೆಯ ಜಿಲ್ಲೆ, ರಾಜ್ಯಗಳ ಆಸಕ್ತ ವಿದ್ಯಾರ್ಥಿಗಳು ಯಾವುದೇ ಗೊಂದಲ ಹಾಗೂ ಆತಂಕವಿಲ್ಲದೆ ಕೊಡಗು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳು 4ನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಶ್ವವಿದ್ಯಾಲಯದ ಅಸ್ತಿತ್ವ ಹಾಗೂ ಮುಂದುವರೆಕೆಯಲ್ಲಿ ಯಾವುದೇ ಗೊಂದಲವಿಲ್ಲ. ತನ್ನ ಸ್ವಂತ ಸಂಪನ್ಮೂಲದಲ್ಲಿ ವಿಶ್ವವಿದ್ಯಾಲಯದ ಆಡಳಿತವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ರಾಜ್ಯ ಸರಕಾರದ ಮುಂದೆ ಇಲ್ಲ ಎಂಬುದನ್ನು ಹಲವು ಬಾರಿ ಸಂಬಂಧಿಸಿದ ಸರಕಾರ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಕೊಡಗು ಜಿಲ್ಲೆ ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ವಿಶಿಷ್ಟ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು, ಅತೀ ಹೆಚ್ಚು ಮಳೆ ಬೀಳುವ ಗುಡ್ಡಗಾಡು ಪ್ರದೇಶವಾಗಿದೆ. ಕಡಿಮೆ ಜನಸಾಂದ್ರತೆ ಹೊಂದಿರುವ ಈ ಜಿಲ್ಲೆಯನ್ನು ವಿಶೇಷ ಅಗತ್ಯತೆ ಇರುವ ಜಿಲ್ಲೆಯೆಂದು ವರ್ಗೀಕರಿಸಲಾಗಿದೆ. ಇಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಶೇ.18 ಆಗಿದ್ದು, ರಾಜ್ಯದ ಅನುಪಾತದ ಅರ್ಧದಷ್ಟಾಗಿದೆ. ಇದು ರಾಜ್ಯದಲ್ಲಿ 26 ಸ್ಥಾನದಲ್ಲಿದೆ.
ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಗಿರಿಜನರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರ ಸಂಖ್ಯೆ ಅಧಿಕವಾಗಿರುವುದರಿಂದ ಕೊಡಗಿನಲ್ಲಿ ಉನ್ನತ ಶಿಕ್ಣದ ಒಟ್ಟು ದಾಖಲಾತಿ ಅನುಪಾತ ಪ್ರಮಾಣ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು. ನೂರಾರು ಕಿ.ಮೀ.ದೂರ ಹೋಗಿ ಪೋಷಕರಿಂದ ದೂರ ಉಳಿದು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಬಹು ಹತ್ತಿರದಲ್ಲೇ ಉನ್ನತ ಶಿಕ್ಷಣವನ್ನು ಒದಗಿಸುವ ಸದುದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡಗು ವಿಶ್ವವಿದ್ಯಾಲಯವ್ನು ಸ್ಥಾಪಿಸಲಾಗಿದ್ದು, ಇದು ಕೊಡಗಿನ ಗ್ರಾಮೀಣ ಬಡವರ, ದುರ್ಬಲ ವರ್ಗದವರ, ದೀನ-ದಲಿತರ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಉನ್ನತ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಬೇಕಾದ ಪರಿಸ್ಥಿತಿಯನ್ನು ಪರಿಹರಿಸಿದೆ ಎಂದು ಹೇಳಿದರು. ಕೊಡಗು ವಿವಿ ವ್ಯಾಪ್ತಿಯಲ್ಲಿ ಒಂದು ಘಟಕ ಕಾಲೇಜು, ಆರು ಸರಕಾರಿ ಕಾಲೇಜು, ಮೂರು ಅನುದಾನಿತ ಕಾಲೇಜು ಮತ್ತು 14 ಖಾಸಗಿ ಕಾಲೇಜುಗಳಿದ್ದು, ಈ ಸಂಸ್ಥೆಗಳು ಸುಸಜ್ಜಿತವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆಗೆ ಭೌತಿಕ ಹಾಗೂ ಬೋಧನಾ ಸಂಪನ್ಮೂಲವನ್ನು ಒದಗಿಸುವಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದು, ಈ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ ಮುಂತಾದವುಗಳಿಗೆ ಸಂಪೂರ್ಣ ಸಹಯೋಗ ನೀಡುತ್ತದೆ ಎಂದರು. ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ಹಲವು ವರ್ಷಗಳ ಹಿರಿತನವಿರುವ ವಿಶ್ವವಿದ್ಯಾಲಯಗಳಂತೆ ಕೊಡಗು ವಿಶ್ವವಿದ್ಯಾಲಯವು ಯುಜಿಸಿ ನಿಯಮದ ಪರಿಚ್ಛೇದ 2(ಎಫ್) ಅಡಿಯಲ್ಲಿ ಮಾನ್ಯತೆ ಪಡೆದಿದೆ ಮತ್ತು ಬಿಸಿಎ, ಬಿಬಿಎ, ಎಂಬಿಎ, ಎಂಸಿಎ ಕಾರ್ಯಕ್ರಮಗಳಿಗೆ ವಿಶೇಷವಾಗಿ ಎಐಸಿಟಿಇ ಮಾನ್ಯತೆ ದೊರೆತಿದೆ ಎಂದು ಹೇಳಿದರು. ಕೊಡಗು ವಿವಿ ಸಂಯೋಜಿತ ಕಾಲೇಜುಗಳಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ (ಎಐ/ಎಂಎಲ್) ಬಿ.ಸಿ.ಎ, ಬಿ.ಬಿ.ಎ (ಟಿಟಿಎಂ), ಬಿಎ (ಹೆಚ್.ಆರ್.ಡಿ), ಬಿಎಸ್‍ಡಬ್ಲ್ಯೂ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ವಿಸ್ತೃತ ವಿಷಯ ಸಂಯೋಜನೆಗಳೊಂದಿಗೆ ಅಧ್ಯಯನಕ್ಕೆ ಲಭ್ಯವಿದೆ. ಕೊಡಗು ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳಾದ ಎಂ.ಎ, ಎಂ.ಎಸ್ಸಿ, ಎಂ.ಕಾಂ, ಎಂ.ಎಸ್.ಡಬ್ಲ್ಯೂ ಕೋರ್ಸ್‍ಗಳು ನಡೆಯುತ್ತಿದ್ದು, 2025-26ನೇ ಶೈಕ್ಷಣಿಕ ಸಾಲಿನಿಂದ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿಗಳನ್ನು ಕೇಂದ್ರ ಸ್ಥಾನದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ. ಅಲ್ಲದೇ ಗುಣಮಟ್ಟದ ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿಗಳ ಸಂಪನ್ನತೆಯ ನಿಟ್ಟಿನಲ್ಲಿ ಸಂಯೋಜಿತ ಕಾಲೇಜುಗಳಿಗೆ ಸಂಪೂರ್ಣ ಸಹಯೋಗ ನೀಡುತ್ತಿದೆ ಎಂದರು. ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ರಾಜ್ಯದಲ್ಲಿಯೇ ಗಮನಾರ್ಹ ಪ್ರಗತಿ ಸಾಧಿಸಿದ ಕೊಡಗು ವಿವಿ, ಮೌಲ್ಯಮಾಪನಕ್ಕಾಗಿ ಪ್ರತ್ಯೇಕ ಸಹಾಯವಾಣಿಯನ್ನು ಹೊಂದಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಅವಕಾಶ ಕಲ್ಪಿಸಲು ಸುಮಾರು 25ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ. ಅಲ್ಲದೆ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ಪ್ರಾಂರಭಿಸುತ್ತಿದೆ ಎಂದು ತಿಳಿಸಿದರು. ಕಾಲೇಜು ಸ್ಥಾಪನೆಯಾದ ಅಲ್ಪಾವಧಿಯಲ್ಲಿಯೇ ಹಲವು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳು ಇತ್ಯಾದಿಗಳೊಂದಿಗೆ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು, ಕೌಶಲ್ಯ ತರಬೇತಿ, ಜಂಟಿ ಸಂಶೋಧನಾ ಕಾರ್ಯಗಳ ಸಂಬಂಧ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಅಲ್ಲದೇ ಕೊಡಗು ವಿವಿ ಮತ್ತು ಅದರ ಎಲ್ಲಾ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಫ್ಯಾಕಲ್ಟಿ ಡೆವಲಪ್‍ಮೆಂಟ್ ಅಕಾಡೆಮಿಯ ಸ್ಥಾಪನೆ ಮಾಡಲಾಗಿದೆ. ಈ ಅಕಾಡೆಮಿಯ ಮುಖಾಂತರ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ಫೋರ್ಕ್ ಟೆಕ್ನಾಲಜೀಸ್ ಲಿಮಿಟೆಡ್ ಬೆಂಗಳೂರು, ಇನ್ಫೋಸಿಸ್ ಪೌಂಡೇಶನ್ ಮೈಸೂರು, ವರ್ಯಾಕಲ್ ಅಕಾಡೆಮಿ, ಸೆಂಟರ್ ಫಾರ್ ಮಲ್ಟಿ ಡೆಸಪ್ಲಿನರಿ ರೀಸರ್ಚ್ ಧಾರವಾಡ ಇತ್ಯಾದಿ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಧ್ಯಾಪಕರಿಗೆ ಅವಶ್ಯವಿರುವ ಜ್ಞಾನ, ವೃತ್ತಿಪರತೆ ಮತ್ತು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ವಿವಿಧ ವಿಯಷಗಳ ಮೇಲೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೊಡಗು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಎಂ.ಸುರೇಶ ಮಾತನಾಡಿ, ಕೊಡಗು ವಿಶ್ವವಿದ್ಯಾಲಯ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅತೀ ಶೀಘ್ರವಾಗಿ ಪರಿಹರಿಸುವಲ್ಲಿ ದಾಖಲೆಯನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಕನಿಷ್ಟ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕಾಳಜಿ ವಹಿಸುತ್ತದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ರಾಘವ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎನ್‍ಸಿಸಿ, ಎನ್‍ಎಸ್‍ಎಸ್, ಕ್ರೀಡೆ ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಸದ್ದಿಗೋಷ್ಠಿಯಲ್ಲಿ ಕೊಡಗು ವಿವಿ ವಿಶೇಷ ಅಧಿಕಾರಿ (ಪರೀಕ್ಷಾಂಗ) ಪ್ರೊ.ಎಂ.ಎನ್.ರವಿ ಶಂಕರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಶ್ರಿಧರ್ ಹೆಗಡೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.











