ಮಡಿಕೇರಿ ಮೇ 21 NEWS DESK : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಮೂಲಕ ಜರುಗುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೊಡಗಿನ ಯುವಕ ಮೂವೆರ ಲೋಚನ್ ಬೋಪಣ್ಣ ಇಂಡಿಯನ್ ಫಾರೆಸ್ಟ್ ಸರ್ವೀಸ್ (ಐಎಫ್‍ಎಸ್)ನಲ್ಲಿ ರಾಷ್ಟ್ರಮಟ್ಟದಲ್ಲಿ 69ನೇಯ ರ‍್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ತೋರಿದ್ದಾರೆ. ಇವರು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಲೋಚನ್ ಬೋಪಣ್ಣ ಮೂಲತಃ ಪೇರೂರು ಬಲ್ಲಮಾವಟಿಯ ನಿವಾಸಿ ಮಡಿಕೇರಿ ದೇಚೂರುವಿನಲ್ಲಿ ನೆಲೆಸಿರುವ ಮೂವೇರ ಸುರೇಶ್ ಹಾಗೂ ಅನು ದೇಚಮ್ಮ (ತಾಮನೆ ಅರಮಣಮಾಡ) ದಂಪತಿಯ ಪುತ್ರ. ಈ ಹಿಂದೆ ಮಡಿಕೇರಿ ಕಾನ್ವೆಂಟ್, ಕೇಂದ್ರೀಯ ವಿದ್ಯಾಲಯ, ಕೊಡಗು ವಿದ್ಯಾಲಯದಲ್ಲಿ ಆರಂಭಿಕ ಶಿಕ್ಷಣ ಪೂರೈಸಿದ್ದ ಲೋಚನ್ 8ನೇ ತರಗತಿಯಿಂದ ಪಿಯುಸಿಯನ್ನು ಮೈಸೂರಿನ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಬಿಎಸ್‍ಸಿ ಅಗ್ರಿಕಲ್ಚರಲ್ ಪದವಿಯನ್ನು ಧಾರವಾಡ ವಿಶ್ವವಿದ್ಯಾನಿಲಯದ ಮೂಲಕ ಗಳಿಸಿದ್ದರು. ಮೈಸೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗದ ಸಂದರ್ಭ ಬೆಸ್ಟ್ ಔಟ್‍ಸ್ಟಾಂಡಿಂಗ್ ವಿದ್ಯಾರ್ಥಿ ಎಂಬ ಸಾಧನೆಗೂ ಪಾತ್ರವಾಗಿದ್ದ ಲೋಚನ್‍ಗೆ ಆ ಸಂದರ್ಭ ಮೆಡಿಕಲ್ ಸೀಟ್ ದೊರೆತಿತ್ತಾದರೂ ಈ ವಿಭಾಗದತ್ತ ಹೆಚ್ಚು ಆಸಕ್ತಿ ತೋರಿ ಮುಂದುವರಿದಿದ್ದು, ಇದೀಗ ಈ ಸಾಧನೆ ಮಾಡಿದ್ದಾರೆ.












