ಮಡಿಕೇರಿ NEWS DESK ಜೂ.5 : ಕಳೆದ ಒಂದು ವರ್ಷದಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮತ್ತು ಸಮಸ್ಯೆಗಳಿಗೆ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ ಎಂದು ವಿರಾಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಶ್ಲಾಘಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷಗಳನ್ನು ಪೂರೈಸಿದೆ. ಯದುವೀರ್ ಒಡೆಯರ್ ಅವರು ಸಂಸದರಾಗಿ ಒಂದು ವರ್ಷ ಪೂರೈಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಸಂಸದರು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಂಸದ ಯದುವೀರ್ ಅವರು ಕೊಡಗಿನ ಬಗ್ಗೆ ಕಾಳಜಿ ವಹಿಸದೆ ಮೈಸೂರಿಗೆ ಸೀಮಿತವಾಗಿದ್ದಾರೆ ಎಂದು ಕೆಲವರು ನೀಡಿರುವ ಹೇಳಿಕೆ ಖಂಡನೀಯ. ಮುಂಬರುವ ಜಿ.ಪಂ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಹಾಗೂ ಪತ್ರಕರ್ತರ ಸೋಗಿನ ರಾಜಕಾರಣಿಗಳು ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಸಂಸದರ ಕುರಿತು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸದರು ಕೊಡಗು ಜಿಲ್ಲೆಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ, ಯಾವ ಯಾವ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಎಷ್ಟು ಶ್ರಮಿಸುತ್ತಿದ್ದಾರೆ ಎನ್ನುವ ಬಗ್ಗೆ ಬಿಜೆಪಿ ಬಳಿ ದಾಖಲೆ ಇದೆ. ಆದರೆ ರಾಜಕೀಯ ದುರುದ್ದೇಶದಿಂದ ಟೀಕೆ ಮಾಡುವವರಿಗೆ ಮಾಹಿತಿಯ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಸಂಸದರು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಗ್ರಾ.ಪಂ ಮಟ್ಟದ ಬಿಜೆಪಿ ಶಕ್ತಿ ಕೇಂದ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸದರು ಕಾರ್ಯಕರ್ತರ ಮೂಲಕ ಗ್ರಾಮಸ್ಥರ ಸಮಸ್ಯೆಗಳನ್ನು ಅರಿತು ಸ್ಪಂದಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ಇಲವಾಲ, ಕುಶಾಲನಗರ ಹೆದ್ದಾರಿ ಅಭಿವೃದ್ಧಿಯಾಗುತ್ತಿದೆ. ಪೊನ್ನಂಪೇಟೆಯಲ್ಲಿ ನೂತನ ಅಂಚೆ ಕಚೇರಿ ಉದ್ಘಾಟನೆಗೆ ಸಜ್ಜಾಗಿದೆ. ಸೋಮವಾಪೇಟೆಯಲ್ಲಿ ಸಿಂಥಟಿಕ್ ವಾಲಿಬಾಲ್ ಮೈದಾನ, ಕಾನೂರಿನಲ್ಲಿ ಬ್ಯಾಡ್ ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಹೀಗೆ ಸಂಸದರು ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ದಿಶಾ ಸಮಿತಿಯ ಸದಸ್ಯರ ಮೂಲಕ ಕೊಡಗಿನ ಸಮಸ್ಯೆಗಳನ್ನು ಅರಿತು ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಸಂಸದರ ನಿಧಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಮಡಿಕೇರಿ ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೇಂದ್ರದ ಮೂಲಕ ಕ್ರಮ ಕೈಗೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಲಜೀವನ್ ಮತ್ತು ನಗರ ಪ್ರದೇಶದಲ್ಲಿ ಅಮೃತ್ ಯೋಜನೆ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಜಾರಿಯಲ್ಲಿದೆ. ಆದರೆ ರಾಜ್ಯ ಸರ್ಕಾರಿ ಅಧಿಕಾರಿಗಳ ಅಸಹಕಾರದಿಂದ ಈ ಯೋಜನೆಗಳು ಹಿನ್ನಡೆ ಅನುಭವಿಸುತ್ತಿವೆ ಎಂದು ರಾಕೇಶ್ ದೇವಯ್ಯ ಟೀಕಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಕಾಳಜಿ ತೋರದ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರದ ಎನ್‌ಡಿಆರ್ ಎಫ್ ಅನುದಾನದ ಮೂಲಕವೇ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾಮಗಾರಿಗಳು ನಡೆಯುತ್ತಿದೆ. ಕಳೆದ ಬಾರಿಯೂ ಇದೇ ಅನುದಾನದಿಂದ ಕಾಮಗಾರಿ ನಡೆದಿದೆ, ಈ ಬಾರಿ ಕೂಡ ಎನ್‌ಡಿಆರ್ ಎಫ್ ಅನುದಾವನ್ನು ಬಳಸಿಕೊಳ್ಳಲಾಗುತ್ತಿದೆ. ಅತಿವೃಷ್ಟಿ ಹಾನಿಯನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಎನ್‌ಡಿಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ. ಇದೆಲ್ಲವೂ ಸಂಸದರ ಪ್ರಯತ್ನದ ಫಲವಾಗಿ ನಡೆಯುತ್ತಿದೆ. ಆದರೆ ಶಾಸಕರು ಎನ್‌ಡಿಆರ್ ಎಫ್ ಅನುದಾನವನ್ನು ತಾವು ತಂದಿರುವ ಅನುದಾನವೆಂದು ಪ್ರತಿಬಿಂಬಿಸಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಸದರ ಪ್ರಯತ್ನದ ಫಲವಾಗಿ ಕರಿಮೆಣಸು ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕಲಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಂಸದರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ತಮ್ಮ ಕೆಲಸದ ಮೂಲಕವೇ ಹೆಸರು ಮಾಡಿದ್ದಾರೆ ಹೊರತು ಎಲ್ಲೂ ಪ್ರಚಾರವನ್ನು ಬಯಸಿಲ್ಲ. ಆದರೆ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಕೆಲಸವನ್ನೇ ಮಾಡದೆ ನಿತ್ಯ ಬಿಟ್ಟಿ ಪ್ರಚಾರವನ್ನು ಪಡೆಯುತ್ತಿದ್ದಾರೆ. ಇಂತಹವರ ವಿರುದ್ಧ ಟೀಕೆಗಳನ್ನು ಮಾಡದೆ ಚುನಾವಣೆ ಸಂದರ್ಭ ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕಾಗಿ ಸಂಸದರ ವಿರುದ್ಧವೇ ಕೆಲವರು ವಿನಾಕಾರಣ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ವಿರಾಜಪೇಟೆ ಬಿಜೆಪಿ ಸಹಿಸುವುದಿಲ್ಲವೆಂದು ರಾಕೇಶ್ ದೇವಯ್ಯ ತಿಳಿಸಿದ್ದಾರೆ.










