
ಮಡಿಕೇರಿ NEWS DESK ಜೂ.6 : ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು, ಗುಣಮಟ್ಟದ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಈ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಪ್ರಾರಂಭ ಮಾಡಿದ್ದು, ಇದು ಬಡ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು. ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣಪ್ಪ ಮಾತನಾಡಿ, ಅಂಗನವಾಡಿಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಇದರಿಂದ ತುಂಬಾ ಅನುಕೂಲವಾಗಲಿದ್ದು, ಮಾಯಮುಡಿ ವ್ಯಾಪ್ತಿಯ ಜನರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಈ ತರಗತಿಗಳ ಅಗತ್ಯವಿದೆ. ಸರ್ಕಾರದಿಂದ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೋಷಕರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಸರ್ಕಾರದ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಬೇಕು ಎಂದು ಸಲಹೆ ನೀಡಿದ ಅವರು, ಮಾಯಮುಡಿ ಗ್ರಾ.ಪಂ ವ್ಯಾಪ್ತಿಯ ಪೋಷಕರು ತಮ್ಮ ಮಕ್ಕಳನ್ನು ನೂತನ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ದಾಖಲಿಸುವಂತೆ ಮನವಿ ಮಾಡಿದರು. ಇಲ್ಲಿರುವ ಶಿಕ್ಷಕರು ಪ್ರತಿಭಾವಂತರಾಗಿದ್ದು, ಗುಣಮಟ್ಟದ ಶಿಕ್ಷಣ ಸಿಗುವ ವಿಶ್ವಾಸವಿದೆ ಎಂದು ಟಾಟು ಮೊಣ್ಣಪ್ಪ ಹೇಳಿದರು. ಪ್ರಾರಂಭೋತ್ಸವದಲ್ಲಿ ಜಿ.ಪಂ ಮಾಜಿ ಸದಸ್ಯ ಬಿ.ಎನ್.ಪ್ರಥ್ಯು, ಕೆ.ಟಿ.ಟಿಪ್ಪು ಬಿದ್ದಪ್ಪ, ಗ್ರಾ.ಪಂ ಸದಸ್ಯರಾದ ಪಿ.ಯು.ಸರಸ್ವತಿ, ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ, ಸಣ್ಣುವಂಡ ಎಂ.ವಿಶ್ವನಾಥ್, ರಾಯ್ ಮಾದಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯರಾದ ಹೆಚ್.ಬಿ.ಜಯಮ್ಮ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಪೂಜಾ ನಿರೂಪಿಸಿ, ಉಮಾಶಿವು ಸ್ವಾಗತಿಸಿ, ಜಯಶ್ರೀ ವಂದಿಸಿದರು.









