ಮಡಿಕೇರಿ NEWS DESK ಜೂ.13 : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ನೀಡಿರುವ ಅತ್ಯಂತ ಶ್ರೇಷ್ಠವಾದ ಸಂವಿಧಾನದಲ್ಲಿ ಅಳವಡಿಸಿರುವ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತು ಸಮರ್ಥವಾಗಿ ನಿಭಾಯಿಸುವವರೆಗೆ ರಾಷ್ಟçದ ಬೆಳವಣಿಗೆ ಅಸಾಧ್ಯವೆಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ. ಡಾ.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ನಗರಸಭಾ ಪೌರಕಾರ್ಮಿಕರಿಗೆ ಸ್ವೆಟರ್ ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಸಂಕೇತ್ ಪೂವಯ್ಯ ಅವರು ಡಾ.ಅಂಬೇಡ್ಕÀರ್ ಅವರು ನೀಡಿರುವ ಸಂವಿಧಾನದಿಂದ ವಿಶ್ವಮಟ್ಟದಲ್ಲಿ ಭಾರತ ಇಂದು ಗೌರವವನ್ನು ಪಡೆಯುತ್ತಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕುಗಳು, ಸಮಾನತೆಯ ಅವಕಾಶಗಳಿಂದ ಜನರ ಬದುಕಿನಲ್ಲಿ ಸುಧಾರಣೆ ಕಾಣಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದರು. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಕುರಿತಾದ ಮಾಹಿತಿಗಳು ಪಠ್ಯ ಪುಸ್ತಕದಲ್ಲಿ ಅಳವಡಿಕೆಯಾಗಬೇಕು. ಆ ಮೂಲಕ ಮಕ್ಕಳಲ್ಲಿ ಸಂವಿಧಾನದ ಅರಿವನ್ನು ಮೂಡಿಸುವ ಪ್ರಯತ್ನ ನಡೆಯಬೇಕು. ಇಲ್ಲಿಯವರೆಗೆ ಇಂತಹ ಪ್ರಯತ್ನವಾಗದೇ ಇರುವುದು ಶೋಚನೀಯವೆಂದರು. ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಳೆದ ಹಲವು ವರ್ಷಗಳಿಂದ ಸಂಪನ್ಮೂಲದ ಕೊರತೆಯ ನಡುವೆಯೂ ನೊಂದವರ, ಶೋಷಿತರ ಹಾಗೂ ಸಂಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯವೆಂದರು.
ನಗರ ಸ್ವಚ್ಛತೆಯ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಬದುಕಿನ ಸುಧಾರಣೆಗಳ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತ್ರ ಮಾತನಾಡಲಾಗುತ್ತಿದೆ. ಪೌರಕಾರ್ಮಿಕರ ಬದುಕು ಎಷ್ಟು ಸುಧಾರಿಸಿದೆ ಎನ್ನುವ ಚಿಂತನೆ ಸಂಬಂಧಿಸಿದವರಿಗೆ ಇಲ್ಲದಿರುವುದು ವಿಪರ್ಯಾಸ ಎಂದು ಸಂಕೇತ್ ಪೂವಯ್ಯ ಬೇಸರ ವ್ಯಕ್ತಪಡಿಸಿದರು.
ಸಮಾಜ ಸೇವಕ ಡಾ.ಬಿ.ಸಿ.ನವೀನ್ ಕುಮಾರ್ ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರು ಸೇರಿದಂತೆ ಯಾವುದೇ ಆದರ್ಶವಾದಿಗಳ ‘ಜಯಂತಿ’ಗಳು ಇಂದು ಕೇವಲ ಮೆರವಣಿಗೆ ಆಡಂಭರಕ್ಕಷ್ಟೇ ಸೀಮಿತವಾಗಿದೆ. ಕೆಲವರಿಗೆ ಇಂತಹ ಜಯಂತಿಗಳು ಅವರ ಬದುಕೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರ್ ಅವರ ಜಯಂತಿಯಂದು ಅವರ ಚಿಂತನೆಗಳನ್ನು ಸ್ಮರಿಸುತ್ತ, ಅವರ ತತ್ವ ಆದರ್ಶಗಳನ್ನು ಪಾಲಿಸುವ ನಿಟ್ಟಿನ ಹೆಜ್ಜೆಯೇ ಆಗಬೇಕೆಂದರು.
*ಪ್ರಶ್ನೆ ಮಾಡಿ* ನಗರ ಸ್ವಚ್ಛತಾ ಕಾರ್ಯಗಳಲ್ಲಿ ಎಷ್ಟರ ಮಟ್ಟಿಗೆ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಅದಕ್ಕಾಗಿ ಯಾವೆಲ್ಲ ಸವಲತ್ತುಗಳನ್ನು ನೀಡಲಾಗಿದೆ ಎನ್ನುವುದನ್ನು ಪೌರಕಾರ್ಮಿಕರು ಪ್ರಶ್ನಿಸುವುದು ಅತ್ಯವಶ್ಯಕವಾಗಿದೆ. ಇಲ್ಲದಿದ್ದಲ್ಲಿ ನೀವು ಈಗ ಹೇಗಿದ್ದೀರೋ ಹಾಗೆಯೇ ಉಳಿಯಲಿದ್ದೀರ ಎಂದು ಡಾ.ನವೀನ್ ಎಚ್ಚರಿಕೆಯ ನುಡಿಗಳನ್ನಾಡಿದರು.
ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ತಮ್ಮ ಬಾಲ್ಯದ ಅವಧಿಯಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ, ಅವುಗಳಿಂದ ಎದೆಗುಂದದೆ, ಅವಮಾನವನ್ನೇ ಸಾಧನೆಗೆ ಪ್ರೇರಣೆಯಾಗಿಸಿಕೊಂಡು 28 ಪದವಿಗಳನ್ನು ಪಡೆದುಕೊಂಡರು. ಅದೇ ಸಮಾಜದಿಂದ ಬಂದವರೆಲ್ಲರು ಒಂದಿಲ್ಲ ಒಂದು ಅವಮಾನ ಎದುರಿಸಿಕೊಂಡೇ ಬಂದಿರುತ್ತೀರ. ಅವುಗಳನ್ನೆಲ್ಲ ಕೆಚ್ಚೆದೆಯಿಂದ ಎದುರಿಸಿ, ಶಿಕ್ಷಣಕ್ಕೆ ಮಹತ್ವವನ್ನಿತ್ತು ಮುನ್ನಡೆಯುವಂತಾಗಬೇಕು ಎಂದರು.
ಇಂದಿನ ಮುಕ್ತ ಸಮಾಜದಲ್ಲಿ ವ್ಯಸನಗಳಿಗೆ ಬಲಿಯಾಗುವ ಅವಕಾಶಗಳು ಹೆಚ್ಚಾಗಿದೆ. ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ಉತ್ತಮ ಶಾಂತಿಯುತವಾದ ಬದುಕಿನ ಹಾದಿಯ ಬಗ್ಗೆ ಮಾಹಿತಿ ನೀಡುವ ಕಾರ್ಯ ನಡೆಯಬೇಕಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಅರಿತು ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಡಾ.ಬಿ.ಸಿ.ನವೀನ್ ತಿಳಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಸಂಘಟನೆಯ ಮೂಲಕ ಈ ಹಿಂದೆ ನೆಲೆ ಇಲ್ಲದವರಿಗೆ ನಿವೇಶನ, ಮನೆಗಳನ್ನು ಒದಗಿಸುವ ಕಾರ್ಯಗಳನ್ನು ಸಂಘಟನೆ ನಡೆಸಿದೆ. ಆದರೆ, ಸೌಲಭ್ಯ ಹೊಂದಿಕೊಂಡವರು ಸಂಘಟನೆಯತ್ತ ಮತ್ತೆ ತಿರುಗಿ ನೋಡದಿರುವುದು ಬೇಸರವನ್ನುಂಟುಮಾಡಿದೆ. ಈ ಹಿನ್ನೆಲೆ ಸಂಘಟನೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಇದರಿಂದ ಪರೀಕ್ಷಾ ಫಲಿತಾಂಶಗಳಲ್ಲಿ ರಾಜ್ಯದಲ್ಲಿ 14ನೇ ಸ್ಥಾನದಲ್ಲಿದ್ದ ಕೊಡಗು 4ನೇ ಸ್ಥಾನಕ್ಕೆ ಬಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಕೊಡಗು ಪ್ರಥಮ ಸ್ಥಾನಕ್ಕೆ ಬರಲಿದೆ, ಅದಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.
ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.
*ಸ್ವೆಟರ್ ವಿತರಣೆ* ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಪೌರಕಾರ್ಮಿಕರಿಗೆ ಸ್ವೆಟರ್‌ಗಳನ್ನು ಅತಿಥಿ ಗಣ್ಯರು ವಿತರಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ವೃದ್ಧಾಶ್ರಮದ ಹಿರಿಯರಿಗೆ ವಸ್ತçಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ವಿರಾಜಪೇಟೆ ತಾಲ್ಲೂಕು ದಸಂಸ ಸಂಚಾಲಕ ಹೆಚ್.ಕೆ.ಸಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಣ್ಣಯ್ಯ ಅವರ ಮಕ್ಕಳಾದ ಗೋಪಾಲ್, ವನೀತ, ದಸಂಸ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ದಂಸಸ ಪ್ರಮುಖರಾದ ಗಣೇಶ್ ಉಪಸ್ಥಿತರಿದ್ದರು.










