ಮಡಿಕೇರಿ NEWS DESK ಜೂ.13 : ಸುದೀರ್ಘ ಹೋರಾಟಗಳ ಬಳಿಕವೂ ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕನಿಷ್ಟ ಮೃತ ವ್ಯಕ್ತಿಯ ಗೌರವಯುತ ಸಂಸ್ಕಾರಕ್ಕೆ ‘ಸ್ಮಶಾನ’ವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯದ ಗಂಭೀರತೆಯನ್ನು ಅರಿತ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಸಮಸ್ಯೆಯ ಪರಿಹಾರದ ಬಗ್ಗೆ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲವೆಂದು ಸ್ಮಶಾನ ಹೋರಾಟ ಸಮಿತಿಯ ಸಂಚಾಲಕ ಪಿ.ಆರ್.ಭರತ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲಿಹುದಿಕೇರಿಯ 10 ರಿಂದ 12 ಸಾವಿರ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಬಡವರು ಮತ್ತು ಕೂಲಿಕಾರ್ಮಿಕರು. ಇವರು ಬಹಳಷ್ಟು ವರ್ಷಗಳಿಂದ ವ್ಯವಸ್ಥಿತವಾದ ಸ್ಮಶಾನ ಜಾಗವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಇನ್ನಾದರು ಸ್ಮಶಾನ ಜಾಗ ಒದಗಿಸುವಂತೆ ಆಗ್ರಹಿಸಿ ಜೂ.16 ರಂದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯ್ತಿ ಮುಂಭಾಗ ‘ಅಣಕು ಶವಯಾತ್ರೆ’ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸ್ಮಶಾನ ಹೋರಾಟ ಸಮಿತಿಯ ಹೋರಾಟಗಳ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ತಹಶೀಲ್ದಾರರು ಈ ಸಂಬಂಧ ನಡೆಸಿದ ಸಭೆಯಲ್ಲಿ, ಮೂರು ತಿಂಗಳ ಅವಧಿಯಲ್ಲಿ ಸ್ಮಶಾನ ಜಾಗ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಏಳು ತಿಂಗಳು ಕಳೆದಿದ್ದರು ‘ಸ್ಮಶಾನ’ ಜಾಗ ದೊರಕಿಲ್ಲ. ಹೀಗಿದ್ದೂ ಈ ಅವಧಿಯಲ್ಲಿ ತಹಶೀಲ್ದಾರರು ಬೆಟ್ಟದಕಾಡು ಮಾರ್ಗದ ಬಳಿಯ ಸರ್ವೇ ನಂ.177 ರಲ್ಲಿ 1.02 ಏಕರೆ ಜಾಗವನ್ನು ಸ್ಮಶಾನಕ್ಕೆಂದು ಗುರುತಿಸಿದ್ದಾರೆ. ಆದರೆ, ಇದನ್ನು ಸ್ಮಶಾನಕ್ಕೆ ನಿಗಧಿಗೊಳಿಸಿ ಆರ್‌ಟಿಸಿ ಮಾಡುವಲ್ಲಿ ನೆಲ್ಲಿಹುದಿಕೇರಿ ವ್ಯಾಪ್ತಿಯ ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ದಂಧೆಗಳು ಅಡ್ಡಗಾಲು ಹಾಕುತ್ತಿರುವುದಾಗಿ ಆರೋಪಿಸಿದರು.
*ಅಂತ್ಯಸಂಸ್ಕಾರ ಎಚ್ಚರಿಕೆ* ನೆಲ್ಲಿಹುದಿಕೇರಿಯ ಕಾವೇರಿ ನದಿ ಪಾತ್ರದಲ್ಲಿ ಇದ್ದ ಅರ್ಧ ಏಕರೆ ಸ್ಮಶಾನ, ವರ್ಷದಿಂದ ವರ್ಷಕ್ಕೆ ಕಾವೇರಿ ಪ್ರವಾಹದಿಂದ ಕುಸಿತಕ್ಕೆ ಒಳಗಾಗಿ ಇಂದು ಕೇವಲ ಕಾಲು ಏಕರೆಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಅದಾಗಲೆ ‘ಸ್ಮಶಾನ’ಕ್ಕೆಂದು ಮೀಸಲಾಗಿ, ಆರ್‌ಟಿಸಿಯಾಗಿದ್ದರು, ಒತ್ತುವರಿಯಾಗಿ ಕಾಫಿ ತೋಟವಾಗಿ ಪರಿವರ್ತನೆಯಾಗಿದೆ. ಜಾಗದ ತೆರವಿಗೆ ಆಡಳಿತ ವ್ಯವಸ್ಥೆ ಆಸಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದಾಗ, ಅಂತ್ಯಸಂಸ್ಕಾರವನ್ನು ಒತ್ತುವರಿ ಜಾಗದಲ್ಲೆ ನಡೆಸಲಾಗುವುದು. ಈ ಸಂದರ್ಭ ಉಂಟಾಗಬಹುದಾದ ಸಂಘರ್ಷಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸ್ಮಶಾನ ಜಾಗಕ್ಕಾಗಿ ಕಾನೂನಾತ್ಮಕ ಹೋರಾಟಕ್ಕೂ ಸ್ಮಶಾನ ಹೋರಾಟ ಸಮಿತಿ ಸಿದ್ಧವಿದೆ ಎಂದು ಪಿ.ಆರ್.ಭರತ್ ತಿಳಿಸಿದರು. ಪ್ರಸ್ತುತ ಕಾವೇರಿ ನದಿ ಪಾತ್ರದಲ್ಲಿರುವ ಕಾಲು ಏಕರೆ ಸ್ಮಶಾನ ಜಾಗದಲ್ಲಿ ಅಂತ್ಯಸಂಸ್ಕಾರವನ್ನು ಮಾಡಲಾಗುತ್ತಿದೆ. ಪ್ರತಿ ಅಂತ್ಯಸಂಸ್ಕಾರದ ಸಂದರ್ಭ ಮಣ್ಣು ಮಾಡಿರುವ ಮೃತದೇಹಗಳು ಕಂಡು ಬರುವ ಹೀನಾಯ ಪರಿಸ್ಥಿತಿ ಇದೆ. ಕಾವೇರಿ ಪ್ರವಾಹದ ಸಂದರ್ಭ ಮಣ್ಣು ಮಾಡಲಾದ ಮೃತದೇಹಗಳು ಕಾವೇರಿಯ ಒಡಲನ್ನು ಸೇರುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಈ ದುಸ್ಥಿತಿ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು ಸೂಕ್ತ ಸ್ಪಂದನ ದೊರಕಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ನೆಲ್ಲಿಹುದಿಕೇರಿ ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಟಿ.ಟಿ.ಉದಯ ಕುಮಾರ್, ಎನ್.ನಾರಾಯಣ, ಕೆ.ಜಿ.ರಮೇಶ್, ವಿ.ವಿ.ಪ್ರಭಾಕರ್ ಹಾಗೂ ಪಿ.ಜಿ.ಸುರೇಶ್ ಉಪಸ್ಥಿತರಿದ್ದರು.










