ಮಡಿಕೇರಿ ಜು.2 NEWS DESK : ಚೆಟ್ಟಿಮಾನಿ ಅಂಗನವಾಡಿಯಲ್ಲಿ ಎಲ್ ಕೆ ಜಿ ಪ್ರಾರಂಭೋತ್ಸವ ಹಾಗೂ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ದಿನೇಶ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಕೊಠಡಿಯ ಬೇಡಿಕೆಯನ್ನು ಸಲ್ಲಿಸಿದ್ದು, ಅದನ್ನು ನೆರವೇರಿಸುವುದಾಗಿ ಭರವಸೆ ನೀಡಿದರು. ಮಾದರಿ ಎಲ್ ಕೆ ಜಿ ಕೇಂದ್ರವಾಗಿ ಚೆಟ್ಟಿಮಾನಿ ಕೇಂದ್ರವನ್ನು ಮಾರ್ಪಾಡಲಿಸಲು ಗ್ರಾ.ಪಂ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು. ಗ್ರಾ.ಪಂ ಸದಸ್ಯರಾದ ಹ್ಯಾರಿಸ್ ಮಾತನಾಡಿ, ಯಾವುದೇ ಯೋಜನೆಗಳನ್ನು ಇಲಾಖೆ ತಂದರು ನಮ್ಮ ಗ್ರಾಮ ಪಂಚಾಯತಿಯ ಅಂಗನವಾಡಿ ಕಾರ್ಯಕರ್ತೆಯರು ಬಹಳ ಶಿಸ್ತಿನಿಂದ ಯೋಜನೆಯ ಯಶಸ್ವಿಗೆ ಶ್ರಮಿಸುತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು. ಈ ಹೊಸ ಆಲೋಚನೆಗೆ ಗ್ರಾಮ ಪಂಚಾಯತಿಯ ಮತ್ತು ವೈಯಕ್ತಿಕ ಸಹಕಾರ ಸದಾ ಇರುವುದಾಗಿ ತಿಳಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಎಲ್ ಕೆ ಜಿ ಯನ್ನು ಅಂಗನವಾಡಿಯಲ್ಲಿ ಪ್ರಾರಂಭಿಸುತ್ತಿರುವುದು ಇಲಾಖೆ ಅತ್ಯುತ್ತಮ ಯೋಜನೆಯಲ್ಲಿ ಒಂದಾಗಿದೆ. ಬಡ ಮಕ್ಕಳಿಗೆ ಆಂಗ್ಲ ಭಾಷೆ ಶಿಕ್ಷಣವನ್ನು ಅಂಗನವಾಡಿಯಲ್ಲಿ ಎಲ್ ಕೆ ಜಿ ಮೂಲಕ ಒದಗಿಸುವುದರಿಂದ ಮಕ್ಕಳ ಭವಿಷ್ಯ ಮತ್ತಷ್ಟು ಉತ್ತಮ ಪಡಿಸಲು ಸಹಕಾರಿ ಆಗಲಿದೆ ಎಂದು ಹೇಳಿದರು. ಪೂರ್ವಭಾವಿ ಸಭೆಯಲ್ಲಿ ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಸದಸ್ಯ ಹ್ಯಾರಿಸ್ ಮತ್ತು ಫಲಾನುಭವಿಗಳೊಂದಿಗೆ ಪ್ರಾರಂಭೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಹಲವಾರು ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಅದರಂತೆ ಈ ದಿನ ಗ್ರಾಮ ಪಂಚಾಯತಿ ವತಿಯಿಂದ ಸಮವಸ್ತ್ರ, ಅಶ್ವಿನಿ ಯೋಗಿನಿ ಅವರಿಂದ ಮಕ್ಕಳಿಗೆ ಚೇರ್, ಕೇದಂಬಾಡಿ ಯಮುನಾ ಕುಸುಮರವರಿಂದ ಮಕ್ಕಳಿಗೆ ಸ್ವೆಟರ್ ಮತ್ತು ಕ್ಯಾಪ್, ಕೆದಂಬಾಡಿ ವರದರಾಜರವರಿಂದ ಟೇಬಲ್, ಕೆದಂಬಾಡಿ ರುಕ್ಮಿಣಿ, ಪೂಣಚ್ಚ, ಭವಿತ್, ಹೇಮಲತಾ, ನಯನ, ರವರಿಂದ ಆಟಿಕೆಗಳಿಗಾಗಿ ಹಣ ಸಹಾಯ, ಕೆದಂಬಾಡಿ ರುಕ್ಮಿಣಿ ನಂಜಪ್ಪ ಅವರಿಂದ ಚೇರ್ ಮತ್ತು ಆಟಿಕೆ ಗಳನ್ನು ಕೊಡುಗೆಯಾಗಿ ಪಡೆಯಲಾಗಿದೆ. ಅವರೆಲ್ಲರಿಗೂ ಇಲಾಖೆ ಪರವಾಗಿ ಧನ್ಯವಾದಗಳು ಅರ್ಪಿಸಿದರು. ಮಾದರಿಯಾಗಿ ಎಲ್ ಕೆ ಜಿ ಕೇಂದ್ರವನ್ನಾಗಿ ಚೆಟ್ಟಿಮಾನಿ ಅಂಗನವಾಡಿಯನ್ನು ಪರಿವರ್ತಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸುಶೀ, ಯೋಗಿತಾ ಶ್ರಮಿಸಿದ್ದು ಅಭಿನಂದನೆ ಸಲ್ಲಿಸಿದರು. ಶಿಶು ಅಭಿವೃದ್ಧಿ ಯೋಚನಾಧಿಕಾರಿ ಸೀತಾಲಕ್ಷ್ಮಿ ಮಾತನಾಡಿ, ಅಂಗನವಾಡಿ ಪ್ರಾರಂಭವಾಗಿ 50 ವರ್ಷ ತುಂಬಿದ ಸವಿ ನೆನಪಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭವಾಗುತ್ತಿದೆ. ಮಡಿಕೇರಿ ತಾಲೂಕಿಗೆ 10 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಥಮ ಹಂತದಲ್ಲಿ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಹೇಮಲತಾ, ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಹಾಜರಿದ್ದರು. ಸಹಾಯಕಿ ವಾಸಂತಿ ಪ್ರಾರ್ಥಿಸಿದರು. ಕೋಡಿಮಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ ನಿರೂಪಿಸಿದರು. ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ ಸ್ವಾಗತಿಸಿದರು, ಪದಕಲ್ಲು ಅಂಗನವಾಡಿ ಕಾರ್ಯಕರ್ತೆ ಯೋಗಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಸಿಂಗತೂರು ಅಂಗನವಾಡಿ ಕಾರ್ಯಕರ್ತೆ ರಾಧ, ನವೋದಯ ಅಂಗನವಾಡಿ ಸಹಾಯಕಿ ಜಾನಕಿ, ಕೊಚ್ಚಿ ಅಂಗನವಾಡಿ ಸಹಾಯಕಿ ರೋಸಮ್ಮ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.











