ಮಡಿಕೇರಿ ಜು.3 NEWS DESK : ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಸಭೆ ನಡೆಯಿತು. ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ, ಸಂಪನ್ಮೂಲಗಳ ಬಳಕೆ, ಸ್ಥಳೀಯರ ನೆರವು, ಮಾಹಿತಿ ಹಂಚಿಕೆ, ಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಪರಸ್ಪರ ಚರ್ಚಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಜೂನ್ ತಿಂಗಳ ಅಂತ್ಯದವರೆಗೆ ಅತೀ ಹೆಚ್ಚು ಮಳೆಯಾಗಿದ್ದು, ನದಿ, ಜಲಾಶಯ, ಕೆರೆ, ತೋಡು, ಹಳ್ಳ ಇತರೆ ನೀರಿನ ಮೂಲಗಳು ಈಗಾಗಲೇ ತುಂಬಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಪ್ರಕೃತಿ ವಿಕೋಪ ಉಂಟಾದಲ್ಲಿ ಮುನ್ನೆಚ್ಚಾರಿಕಾ ಕ್ರಮ ಕೈಗೊಳ್ಳುವ ಸಲುವಾಗಿ ಸಭೆ ನಡೆಸಿ ಪ್ರಕೃತಿ ವಿಕೋಪ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು. ಠಾಣೆ ಹಾಗೂ ಗ್ರಾಮ ಬೀಟ್ ವ್ಯಾಪ್ತಿಯಲ್ಲಿ ಸ್ವಯಂಸೇವಕರನ್ನು ಗುರುತಿಸಿ ವಿವರಗಳನ್ನು ಸಂಗ್ರಹಿಸುವುದು, ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ದರಾಗಿರುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾಗ ಕ್ರಮಗಳ ಕುರಿತು ಸ್ವಯಂಸೇವಕರೊಂದಿಗೆ ಠಾಣಾ ಮಟ್ಟದಲ್ಲಿ ಸಭೆಯನ್ನು ನಡೆಸಿ ಸೂಕ್ತ ಸಲಹೆಯನ್ನು ನೀಡುವುದು, ಠಾಣಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜೆಸಿಬಿ, ಕ್ರೇನ್, ಟೋಯಿಂಗ್ ವಾಹನ, ವುಡ್ ಕಟ್ಟರ್, 4*4 ಜೀಪ್ ವಿವರ ಹಾಗೂ ವಾಹನದ ಮಾಲೀಕರ ವಿವರಗಳನ್ನು (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ) ಸಂಗ್ರಹಿಸುವಂತೆ ಸೂಚಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘನೆಯ ಸ್ವಯಂಸೇವಕರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಲು ಇಚ್ಚೆಯುಳ್ಳವರು ತಮ್ಮ ವಿವರಗಳನ್ನು (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ) ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ಮೊಬೈಲ್ ಸಂಖ್ಯೆ: 8277958444 ಗೆ ನೇರವಾಗಿ ನೀಡುವಂತೆ ಹಾಗೂ ತಮ್ಮ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ಸ್ವಯಂಸೇವಕರ ಪಟ್ಟಿಯಲ್ಲಿ ಸೇರಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು. ಸಾರ್ವಜನಿಕರು ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪ ಉಂಟಾದ ಸ್ಥಳ ಹಾಗೂ ನೆರವಿನ ಅವಶ್ಯಕತೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ಮೊಬೈಲ್ ಸಂಖ್ಯೆ: 8277958444 ಗೆ ಮಾಹಿತಿಯನ್ನು ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು.












