
ಮಡಿಕೇರಿ ಜು.5 NEWS DESK : ರೋಟರಿ ಕ್ಲಬ್ ಮಡಿಕೇರಿ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ರೋಟರಿ ಕ್ಲಬ್ ಮಡಿಕೇರಿಯ ನೂತನ ಅಧ್ಯಕ್ಷರಾಗಿ ರೋಟರಿಯನ್ ಲಲಿತ ರಾಘವನ್ ಹಾಗೂ ಕಾರ್ಯದರ್ಶಿಯಾಗಿ ಬಿ.ಎಂ.ಸೋಮಣ್ಣ ಅವರು ಅಧಿಕಾರ ಸ್ವೀಕರಿಸಿದರು. ಪಿಡಿಜಿ ರೋಟರಿಯನ್ ಡಾ.ರವಿ ಅಪ್ಪಾಜಿ ಅವರು ಪದಗ್ರಹಣ ಅಧಿಕಾರಿಯಾಗಿ ರೋಟರಿಯನ್ ಸುದಯ್ ನಾಣಯ್ಯ ಅವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು, ನೂತನ ಅಧ್ಯಕ್ಷರು ರೋಟರಿ ಮೌಲ್ಯಗಳನ್ನು ಅರಿತು ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪಣತೊಡಬೇಕು ಮತ್ತು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪಿಡಿಜಿ ರೋಟರಿಯನ್ ಎಂ.ಎಂ.ಚಂಗಪ್ಪ ಅವರು ರೋಟರಿಯಲ್ಲಿ ಗುರುತಿಸಿಕೊಂಡವರು ಸಮಾಜದೊಂದಿಗೆ ಬೆರೆತು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ನೂತನ ಪದಾಧಿಕಾರಿಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು. ರೋಟರಿ ಕ್ಲಬ್ ಮಡಿಕೇರಿಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ 2025-26ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ದಿಲನ್ ಚೆಂಗಪ್ಪ, ಅವರು ರೋಟರಿ ಜಿಲ್ಲೆ 3181 ರಲ್ಲಿ ಗುರುತು ಮಾಡಿರುವ ವಿವಿಧ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಯೋಜನೆಗಳನ್ನು ರೂಪಿಸುವಂತೆ ನೂತನ ತಂಡಕ್ಕೆ ಸಲಹೆ ನೀಡಿದರು. 2025-26ನೇ ಸಾಲಿನ ಝೋನಲ್ ಲೆಫ್ಟಿನೆಂಟ್ ರೋಟರಿಯನ್ ಕೆ.ಸಿ.ಕಾರ್ಯಪ್ಪ ಅವರು ನೂತನ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.









