

ಮಡಿಕೇರಿ NEWS DESK ಜು.5 : ಜನರ ಪ್ರಗತಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಹೊದ್ದೂರು ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿದ ಅವರು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಹೊದ್ದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾದ 26 ಫಲಾನುಭಾವಿಗಳಿಗೆ ವಸತಿ ನಿರ್ಮಾಣದ ಕಾರ್ಯಾದೇಶ ಪತ್ರವನ್ನು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೆ ತರಲಾಗುತ್ತಿದೆ. ಉಚಿತ ವಸತಿ ಯೋಜನೆಗೆ ಫಲಾನುಭವಿಗಳು ಯಾವುದೇ ರೀತಿಯಲ್ಲಿ ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಮನೆ ನಿರ್ಮಿಸಿಕೊಂಡು ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಮನೆ ಮಂಜೂರು ಮಾಡಲು ಸಹಕರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸ್ಮರಿಸಿಕೊಳ್ಳುವುದಾಗಿ ತಿಳಿಸಿದರು. ಅಂಗನವಾಡಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಗ್ರಾ.ಪಂ ಅನುದಾನದಲ್ಲಿ 5 ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿಗಳನ್ನು ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ, ಸದಸ್ಯರಾದ ಕೆ.ಮೊಣ್ಣಪ್ಪ, ಕುಸುಮಾವತಿ, ಚೌರಿರ ಅನಿತಾ, ಮೊಯಿದು ಕೊಟ್ಟಮುಡಿ, ಎಂ.ಬಿ.ಹಮೀದ್ ಕಬಡಕೇರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಕೋಚನ ಹರಿಪ್ರಸಾದ್, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಶೇಖರ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ, ಪಿಡಿಒ ಅಬ್ದುಲ್ಲಾ, ಕಂದಾಯ ನಿರೀಕ್ಷಕ ಚಂದ್ರ ಪ್ರಸಾದ್, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಪಾಟೀಲ್, ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶಾನ್ ರೈ, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.









