
ವಿರಾಜಪೇಟೆ ಆ.4 NEWS DESK : ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಭಾರಿಕಾಡುವಿನಲ್ಲಿ ಎಂಟು ವರ್ಷಗಳಿಂದ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿರುವ 59 ಪರಿಶಿಷ್ಟ ಪಂಗಡ ಕುಟುಂಬಗಳು ಹಾಗೂ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲೈನ್ ಮನೆಗಳಲ್ಲಿ ವಾಸವಿರುವ 70 ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ನಿವೇಶನ ಮತ್ತು ಮನೆಗಳನ್ನು ಹಂಚುವ ಸಲುವಾಗಿ ವಿಶೇಷ ಸಭೆಯನ್ನು ನಡೆಸಲಾಯಿತು. ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು, ಈಗಾಗಲೇ ಪರಿಶಿಷ್ಟ ಪಂಗಡದ 33 ಕುಟುಂಬಗಳಿಗೆ ಸರಕಾರದಿಂದ ಮನೆ ನೀಡಲು ಗುರುತಿಸಲಾಗಿದೆ. ಇವರಿಗೆ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಹಾಗೆಯೇ ಇವರುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲಾ ಕಾಲೇಜುಗಳಿಗೆ ಕಳುಹಿಸಬೇಕು. ಗ್ರಾಮಸ್ಥರ ವಿಶ್ವಾಸ ಗಳಿಸಿಕೊಂಡು ಗ್ರಾಮ ಪಂಚಾಯಿತಿಗೆ, ಗ್ರಾಮಕ್ಕೆ ಬದ್ಧರಾಗಿರುವಂತೆ ಸಲಹೆ ನೀಡಿದರಲ್ಲದೆ ಸರಕಾರದ ಯೋಜನೆಗಳನ್ನು ಎಲ್ಲರೂ ತಪ್ಪದೆ ಪಡೆದುಕೊಳ್ಳುವಂತೆ ತಿಳಿಸಿದರು. ಉಳಿದವರಿಗೂ ಆದಷ್ಟು ಬೇಗ ಮನೆ ನಿರ್ಮಿಸಿ ಕೊಡುವಂತೆ ಸರಕಾರಕ್ಕೆ ಒತ್ತಡ ಹಾಕಲು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಉತ್ತಪ್ಪ ಮಾತನಾಡಿ, ಗ್ರಾಮಾಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ಗ್ರಾಮದಲ್ಲಿನ ಎಲ್ಲಾರ ಸಹಕಾರವನ್ನು ಬಯಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಫಲಾನುಭವಿಗಳಿಗೆ ವಸತಿ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಮತ್ತು ಸಾರ್ವಜನಿಕರುಗಳ ಸಮ್ಮುಖದಲ್ಲಿ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಈ ಪೈಕಿ 33 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಗುರುತಿಸಿದ ಫಲಾನುಭವಿಗಳಿಗೆ ತಮ್ಮ ವೈಯುಕ್ತಿಕ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಯಿತು. ಸಭೆಯಲ್ಲಿ ಪಂಚಾಯಿತಿಯ ಎಲ್ಲಾ ವಾರ್ಡ್ ಸದಸ್ಯರುಗಳು, ಪರಿಶಿಷ್ಟ ಪಂಗಡದ ಇಲಾಖೆಯ ಅಧಿಕಾರಿಗಳಾದ ತೇಜರಾಜ್ ಮತ್ತು ಪ್ರಶಾಂತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಇದ್ದರು.









