
ಮಡಿಕೇರಿ ಆ.6 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೊಟ್ಟೋಳಿ ಗ್ರಾಮದ ಆಶ್ರಯ ಕಾಲೋನಿ ವ್ಯಾಪ್ತಿಯಲ್ಲಿ ರೂ.20 ಲಕ್ಷಗಳ ಅನುದಾನದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಬುನಾದಿ ಆಗಿದೆ. ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂಗನವಾಡಿ ಸ್ಥಳೀಯ ಮಕ್ಕಳ ವಿದ್ಯಾರ್ಜನೆಗೆ ಪೂರಕವಾಗುವಂತಾಗಲಿ ಎಂದು ಹಾರೈಸಿದರು. ಶೀಘ್ರದಲ್ಲೇ ಅಂಗನವಾಡಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ಶಾಲೆಯಿಂದ ಈ ಭಾಗದ ಪುಟಾಣಿ ಮಕ್ಕಳ ವಿದ್ಯಾರ್ಜನೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ನಿವಾಸಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸ ಕಡೆಗೆ ಹೆಚ್ಚಿನ ಗಮನ ನೀಡುವುದು ಇಂದಿನ ಅವಶ್ಯಕತೆಯಾಗಿದ್ದು, ಪುಟಾಣಿ ಮಕ್ಕಳ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಹಾಗೂ ತಾನು ಬದ್ಧರಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಪಂಚಾಯಿತಿ ಅಧ್ಯಕ್ಷ ಜೇಫ್ರಿ ಉತ್ತಪ್ಪ, ಕೆಡಿಪಿ ಸದಸ್ಯ ಮಾಳೆಟೀರ ಪ್ರಶಾಂತ್, ಪಂಚಾಯತಿ ಸದಸ್ಯ ಇಸ್ಮಾಯಿಲ್, ಪವಿತ್ರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.








