
ಮಡಿಕೇರಿ NEWS DESK ಆ.12 : ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸಂಬಂಧಿಸಿದಂತೆ ‘ವೃಂದ ಮತ್ತು ನೇಮಕಾತಿ’ ಆದೇಶದ ತಿದ್ದುಪಡಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಬದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಭವನದ ಎದುರು ಪ್ರತಿಭಟನೆ ನಡೆಸಿತು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚೇತನ್, ಉಪಾಧ್ಯಕ್ಷ ಹೆಚ್.ಎನ್.ಮಂಜುನಾಥ್ ಹಾಗೂ ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ನೂರಾರು ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ತಿದ್ದುಪಡಿಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಹೋರಾಟಗಳನ್ನು ನಡೆಸಿದರು ಸರ್ಕಾರ ಅನುಮೋದನೆ ನೀಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. *ಆ.25 ರ ಗಡುವು* ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚೇತನ್ ಮಾತನಾಡಿ, ಬೇಡಿಕೆಯ ಈಡೇರಿಕೆಗಾಗಿ ಇದೇ ಆ.25 ರ ಗಡುವನ್ನು ರಾಜ್ಯ ಸರಕಾರಕ್ಕೆ ನೀಡಲಾಗುತ್ತಿದೆ. ಈ ಅವಧಿಯಲ್ಲಿಯೂ ಬೇಡಿಕೆ ಈಡೇರದಿದ್ದಲ್ಲಿ ಸೆ.3 ರಂದು ಬೆಂಗಳೂರಿನಲ್ಲಿ ‘ಫ್ರೀಡಂ ಪಾರ್ಕ್ ಚಲೋ’ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಇದಕ್ಕೂ ಸರಕಾರ ಸ್ಪಂದಿಸದಿದ್ದಲ್ಲಿ, ಅಹೋರಾತ್ರಿ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ರಾಜ್ಯ ಸರಕಾರ 2017 ರಲ್ಲಿ ಶಿಕ್ಷಕರ ವೃಂದ ಮತ್ತು ನೇಮಕಾತಿ ಆದೇಶಕ್ಕೆ ತಿದ್ದುಪಡಿಯೊಂದನ್ನು ತರುವ ಮೂಲಕ 1 ರಿಂದ 7 ನೇ ತರಗತಿಯವರೆಗೆ ಪಾಠ ಮಾಡುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ತರಗತಿಗಷ್ಟೆ ಸೀಮಿತಗೊಳಿಸುವ ಅಸಂವಿಧಾನಿಕ ನಿಲುವನ್ನು ತಳೆಯಿತು. ಈ ಆದೇಶದೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿಎಸ್‌ಟಿ ಮತ್ತು ಜಿಪಿಟಿ ಎಂದು ಒಡೆದು ಹಾಕಿತೆಂದು ಆರೋಪಿಸಿದರು. ಯಾವುದೇ ಆದೇಶವನ್ನು ಜಾರಿಗೊಳಿಸುವ ಸಂದರ್ಭ ಅದನ್ನು, ಅದು ಜಾರಿಯಾದ ದಿನಾಂಕದ ಪೂರ್ವಕ್ಕೆ ಅನ್ವಯಿಸುವಂತಿಲ್ಲ. ಹೀಗಿದ್ದೂ ವೃಂದ ಮತ್ತು ನೇಮಕಾತಿ ಆದೇಶವನ್ನು 2017ಕ್ಕೂ ಮುಂಚಿತವಾಗಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗು ಅನ್ವಯಿಸಲಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು. ಇನ್ನು ಮುಂದೆ ಇದೇ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ಮನವಿಗಳನ್ನು ಸಲ್ಲಿಸುವುದಿಲ್ಲವೆಂದ ಚೇತನ್, ಮುಂಬರುವ ದಿನಗಳಲ್ಲಿ ಈಗಾಗಲೆ ಮಾಡಿರುವ ಆದೇಶದಂತೆ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ನೇ ತರಗತಿಯವರೆಗೆ ಮಾತ್ರ ಪಾಠ ಪ್ರವಚನ ಮಾಡುತ್ತಾರೆ. 6 ಮತ್ತು 7ನೇ ತರಗತಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಸ್ಥಗಿತಗೊಳಿಸಲಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಟಿ.ಕೆ.ಬಸವರಾಜು, ಕಾರ್ಯದರ್ಶಿ ಕವಿತಾ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಪೆರಾಜೆ, ಕಾರ್ಯದರ್ಶಿ ಆಕಾಶ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ಅಶ್ವತ್ಥ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಹಲವು ಶಿಕ್ಷಕರು ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.








