
ಮಡಿಕೇರಿ ಆ.13 NEWS DESK : ಅಂತರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್ಐವಿ/ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಷನ್ ಸೊಸೈಟಿ ಬೆಂಗಳೂರು, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಏಡ್ಸ್ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ.ಸನತ್ ಕುಮಾರ್ ಮಾತನಾಡಿ, ಹದಿಹರೆಯದ ಯುವಕರಲ್ಲಿ ಏಡ್ಸ್ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವ ಕುರಿತು ವಿವರಿಸಿದರು. ಸಂಪನ್ಮೂಲ ವ್ಯಕ್ತಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ
ಸುನಿತಾ ಮುತ್ತಣ್ಣ ಮಾತನಾಡಿ, ಹೆಚ್‍ಐವಿ ಎಂಬ ಮಾರಕ ರೋಗವನ್ನು ತಡೆಗಟ್ಟುವಲ್ಲಿ ಯುವಜನತೆ ಪಾತ್ರಗಳು ಅತೀ ಮುಖ್ಯ ವಾಗಿವೆ. ಆರೋಗ್ಯವಂತ ಸಮಾಜವನ್ನು ಕಾಣಬೇಕಾದರೆ ಪ್ರತಿಯೊಬ್ಬರು ಈ ಮಾರಕ ರೋಗದ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ, ಅಂತರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ವಯಂಸೇವಕರು ಸಮಾಜದ ಅಭಿವೃದ್ಧಿಗೆ ತುಂಬಾ ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಯುವಕರಲ್ಲಿ ಈ ಬದಲಾವಣೆ ಅನಿವಾರ್ಯ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕರಾದ ಕೆ.ಎಂ.ದೀಕ್ಷಿತ್ , ಎಸ್ಎಂ.ನಿಶ್ಮಿತಾ, ಬಿ.ಎಂ.ಅನುಶ್ರೀ, ಪಿ.ಆರ್.ಪ್ರಶಾಂತ್, ಡಿ.ಎ.ಪಿ.ಸಿ.ಯು ಸಿಬ್ಬಂದಿಗಳಾದ ಕಮಲ, ಉಷಾ ಮತ್ತು ಎಲ್ಲಾ ಆರ್ ಆರ್ ಸಿ, ಎನ್ಎಸ್ಎಸ್ ಸ್ವಯಂಸೇವಕರು, ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಹಾಜರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಅಲೋಕ್ ಬಿ.ಜೈ ಸ್ವಾಗತಿಸಿದರು. ಎನ್ ಎಸ್ ಎಸ್ ಸ್ವಯಂಸೇವಕಿ ಕವನ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಡಾ. ಕೆ.ಶೈಲಶ್ರೀ ವಂದಿಸಿದರು.









