

ವಿರಾಜಪೇಟೆ ಆ.15 NEWS DESK : ವಿರಾಜಪೇಟೆ ಪುರಸಭೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಭಾರತೀಯರ ಪಾಲಿಗೆ ಇಂದು ಅತ್ಯಂತ ಶುಭದಿನ. ಪರಕೀಯರ ಆಳ್ವಿಕೆಯನ್ನು ಹೊಡೆದೋಡಿಸಿ ಭಾರತೀಯರೇ ನಮ್ಮ ದೇಶವನ್ನು ಆಳಲು ಆರಂಭಿಸಿದ ಐತಿಹಾಸಿಕ ದಿನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರೆಲ್ಲ ನೀಡಿದ ತ್ಯಾಗ, ಬಲಿದಾನವನ್ನು ನಾವೆಲ್ಲರೂ ಸ್ಮರಿಸಲೇಬೇಕು. ಅವರೆಲ್ಲರಿಗೂ ವಂದಿಸುತ್ತಾ, ಸ್ಮರಿಸುತ್ತಾ, ಅವರ ಕೆಚ್ಚೆದೆಯ ಹೋರಾಟವನ್ನು ನೆನೆದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ, ಅದಕ್ಕೆ ನಿಜವಾದ ಅರ್ಥ ದೊರೆತಂತಾಗುತ್ತದೆ ಎಂದು ಬಣ್ಣಿಸಿದರು. ಈ ಸಂದರ್ಭ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳು, ಸರಕಾರಿ ನಾಮನಿರ್ದೇಶಕ ಅಧ್ಯಕ್ಷರು ಹಾಗೂ ಸದಸ್ಯರುಗಳು, ಆಹ್ವಾನಿತ ಗಣ್ಯರು, ಪುರಸಭೆಯ ಪ್ರಮುಖರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








