
ಕುಶಾಲನಗರ ಆ.15 NEWS DESK : ಕೊಡಗು ಸೈನಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೈನಿಕ ಶಾಲೆಯ ಜನರಲ್ ತಿಮಯ್ಯ ಪರೇಡ್ ಮೈದಾನದಲ್ಲಿ ಶಾಲೆಯ ಪ್ರಾಂಶುಪಾರಾದ ಕರ್ನಲ್ ಅಮರ್ ಜೀತ್ ಸಿಂಗ್ ಧ್ವಜಾರೋಹಣ ನೆರವೇರಿ, ಗೌರವ ವಂದನೆ ಸ್ವೀಕರಿಸಿದರು. ನಂತರ ಶಾಲೆಯಲ್ಲಿನ ವೀರಯೋಧರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಕರ್ನಲ್ ಅಮರ್ ಜೀತ್ ಸಿಂಗ್, ಶಿಸ್ತು, ನಿಷ್ಠೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು ಸುಭದ್ರ ಹಾಗೂ ಭವ್ಯ ಭಾರತದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವಿತದ ಪ್ರತಿ ಕ್ಷಣದಲ್ಲಿಯೂ ದೇಶಪ್ರೇಮವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ತಿಳಿಸಿದರು. ಶಾಲೆಯಲ್ಲಿನ ಸರ್ವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಆದರ್ಶ ನಾಗರೀಕರಾಗಬೇಕೆಂದು ತಿಳಿ ಹೇಳಿದರು. ಶಾಲೆ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್ ಹಾಗೂ ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲೆಯ ಪ್ರಥಮ ಮಹಿಳೆ ದಿವ್ಯಾಸಿಂಗ್, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸಿಬ್ಬಂದಿ ವರ್ಗದ ಕುಟುಂಬ ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ವಿದ್ಯಾರ್ಥಿಗಳು ಶಿಸ್ತು ಹಾಗೂ ನಿಯಮಬದ್ಧತೆಯಿಂದ ಪಥಸಂಚಲನ ನಡೆಸಿಕೊಟ್ಟರು. :: ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ :: 2024-25ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಕೆಡೆಟ್ ಶರಣಬಸು ದಸ್ತರೆಡ್ಡಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ, ಕೆಡೆಟ್ ಯಶಸ್ ಎಸ್ ನಾಯಕ್ ಗೆ ಉತ್ತಮ ಶೈಕ್ಷಣಿಕ ವಿಭಾಗ ಪ್ರಶಸ್ತಿ, ಕೆಡೆಟ್ ಮೊಹಮ್ಮದ್ ಅಫ್ತಾಬ್ ಗೆ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ, ಕೆಡೆಟ್ ಎಂ.ಕೆ.ಪ್ರಜ್ವಲ್ ಗೆ ಶ್ರೇಷ್ಠ ಗುಡ್ಡಗಾಡು ಓಟಗಾರ ಪ್ರಶಸ್ತಿ, ಕೆಡೆಟ್ ಲಕ್ಷ್ಯ ಕುಮಾರ್ ಸಿಂಗ್ ಗೆ ಶ್ರೇಷ್ಠ ವಿಜ್ಞಾನ ವಸ್ತು ಪ್ರದರ್ಶನ ಪ್ರಶಸ್ತಿ, ಕೆಡೆಟ್ ಆದಿತ್ಯ ಕುಮಾರ್ ಸಿಂಗ್ ಗೆ ಶ್ರೇಷ್ಠ ಸಾಹಿತ್ಯಿಕ ಸ್ಪರ್ಧೆಗಳ ಪ್ರಶಸ್ತಿ ಹಾಗೂ 7ನೇ ತರಗತಿಯ ಕೆಡೆಟ್ ಧನ್ವಿನ್ ಎಂ ಗೆ ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ 2024-25ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ ಸಿಬಿಎಸ್ ಸಿ ಬೋರ್ಡ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೆಡೆಟ್ ಬಿ.ಯು.ದೀಪ್ತಿ, 10 ಮತ್ತು 12ನೇ ತರಗತಿಯ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯ ವಿವಿಧ ವಿಷಯಗಳಲ್ಲಿ ಶೇ.100ಕ್ಕೆ 100 ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಬೋಧಿಸಿ, ಸೂಕ್ತ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ, ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಶಾಲೆಯಲ್ಲಿ ಅನುಪಮ ಸೇವೆಗೈದ ಶಾಲೆಯ ರಸಾಯನ ಶಾಸ್ತ್ರ ಪ್ರಯೋಗ ಸಹಾಯಕ ಖಾದರ್ ಮೋಹೀದ್ದೀನ್ ಸಿ.ಎಂ, ದ್ವಿತೀಯ ದರ್ಜೆ ಸಹಾಯಕರಾದ ರಾಮಚಂದ್ರ ರಾವ್ ಹಾಗೂ ಸಾಮಾನ್ಯ ಸಿಬ್ಬಂದಿ ವರ್ಗದ ಶರತ್ ಸಿ.ಆರ್ ಅವರಿಗೆ ಪ್ರಶಂಸನಾ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡುವುದರೊಂದಿಗೆ ಗೌರವಿಸಲಾಯಿತು. ಶಾಲೆಯ ಕುದುರೆ ಸವಾರಿಯ ತರಬೇತಿಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಶ್ರೀ ಅಜಯ್ ಸಿ ಮತ್ತು ಶ್ರೀ ಅರುಣ್ ಕುಮಾರ್ ಉತ್ತಮ ತರಬೇತುದಾರ ಬಹುಮಾನ ನೀಡಲಾಯಿತು. ಇದರೊಂದಿಗೆ ಶಾಲೆಯ ಮೆನನ್ ನಿಲಯವು ಪ್ರದರ್ಶಿಸಿದ ಮನೋಜ್ಞವಾದ ಪಥಸಂಚಲನಕ್ಕೆ ‘ಶ್ರೇಷ್ಠ ಪಥಸಂಚಲನ’ ತಂಡವೆಂದು ಘೋಷಿಸಿ ಪ್ರಶಸ್ತಿಯನ್ನು ನೀಡಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದರಿಗೆ ವಿಶೇಷ ಭೋಜವನ್ನು ಏರ್ಪಡಿಸಲಾಗಿತ್ತು.









