ಮಡಿಕೇರಿ NEWS DESK ಆ.15 : ಕೊಡಗು ಜಿಲ್ಲಾಡಳಿತದ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವವನ್ನು ನಗರದ ಕೋಟೆ ಆವರಣದಲ್ಲಿ ಮಳೆಯ ನಡುವೆ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಇತರರು ಇದ್ದರು. *ಸಚಿವರ ಸಂದೇಶ* ಸ್ವಾತಂತ್ರ‍್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಸ್ವಾತಂತ್ರ‍್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಯಾವುದೇ ತಾರತಮ್ಯ ಇಲ್ಲದೆ ಎಲ್ಲರೂ ಒಟ್ಟುಗೂಡಿ ಪ್ರಗತಿಯತ್ತ ಚಿಂತನೆ ಮಾಡೋಣವೆಂದು ಸಚಿವ ಎನ್.ಎಸ್.ಭೋಸರಾಜು ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಕಳೆದ ಎರಡು ವರ್ಷಗಳಲ್ಲಿ ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಶ್ರಮಿಸಿದೆ. ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನರ ತಲಾ ಆದಾಯ ಹೆಚಾಗ್ತಿದೆ. ಪ್ರತಿಯೊಬ್ಬರ ಕೊಳ್ಳುವ ಶಕ್ತಿ ವೃದ್ಧಿಸಿದೆ. ಬಡವರ ಸಂಖ್ಯೆ ಹಾಗೂ ಅಸಮಾನತೆ ಕಡಿಮೆಯಾಗುತ್ತಿದ್ದು, ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು. ಭಾರತೀಯರ ಚಳುವಳಿಯು ದೇಶದ ಸ್ವಾತಂತ್ರ್ಯದ ಹೋರಾಟದ ಮೈಲುಗಲ್ಲಾಗಿದೆ. ಸ್ವಾತಂತ್ರ‍್ಯ ಚಳುವಳಿಯಲ್ಲಿ ಶ್ರಮಿಸಿದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ.ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ.ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ.ಸಿದ್ದಿಕ್. ಎಚ್.ಆರ್.ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರುಗಳನ್ನು ಸ್ಮರಿಸಿಕೊಳ್ಳಬೇಕಾಗಿದೆ. ಬಹು ಹಿಂದಿನಿಂದಲೂ ಕೊಡಗು ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡುವ ನಾಯಕರನ್ನು ಕೊಟ್ಟಿದೆ. ಅದೇ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸ್ಮರಣೀಯರನ್ನು ಸಹ ನೀಡಿದೆ. ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ರತ್ನಗಳು. ಈ ಬಾರಿ ದೀಪಾ ಬಾಸ್ತಿ ಅವರ ಹಾರ್ಟ್ ಲ್ಯಾಂಪ್(ಎದೆಯ ಹಣತೆ) ಕಥಾ ಸಂಕಲನಕ್ಕೆ ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ದೊರೆತಿದ್ದು, ಕೊಡಗು ಜಿಲ್ಲೆಗೆ ಕೀರ್ತಿಯನ್ನು ತಂದಿದೆ ಎಂದು ಸಚಿವ ಭೋಸರಾಜು ಶ್ಲಾಘಿಸಿದರು. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 35 ಕೋಟಿ ಅನುದಾನ ಲಭ್ಯವಿದೆ. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ 3 ಮಾನವಹಾನಿ ಸಂಭವಿಸಿದ್ದು, ತಲಾ 5 ಲಕ್ಷಗಳನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿದೆ. 41 ಮನೆಗಳು ಪೂರ್ಣಹಾನಿಯಾಗಿದ್ದು, ಒಟ್ಟು ರೂ.49.20 ಲಕ್ಷಗಳನ್ನು, 34 ಮನೆಗಳು ತೀವ್ರಹಾನಿ ಹಾಗೂ 181 ಮನೆಗಳು ಭಾಗಶಃ ಹಾನಿಯಾಗಿದ್ದು ಒಟ್ಟು 22.26 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಲಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪವನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಂದಲ್ಲಿ ಮತ್ತಷ್ಟು ಎಚ್ಚರವಹಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಇದಕ್ಕೆ ಸರಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು. ಗಾಳಿಮಳೆಯ ನಡುವೆಯೂ ಆಕರ್ಷಕ ನೃತ್ಯಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ದೇಶಭಕ್ತಿ ಮೆರೆದರು.













