ಮಡಿಕೇರಿ ಆ.29 NEWS DESK : ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದ ಕೋಟೆಯ ಎಸ್.ಆರ್.ಶಿವಪ್ರಸಾದ್ ಮತ್ತು ಚಂಪಕ ದಂಪತಿಯು ತಮ್ಮ ಮಕ್ಕಳಾದ ಕೃತಿಕಾ ಮತ್ತು ಭರತೇಶ್ ಜತೆಗೂಡಿ ತಮ್ಮ ಮನೆಯಲ್ಲಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾರೆ. ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ಗಣೇಶೋತ್ಸವದ ಆಂದೋಲನಕ್ಕೆ ಕೈಜೋಡಿಸಿರುವ ರೈತರಾದ ಎಸ್.ಆರ್.ಶಿವಪ್ರಸಾದ್ ಮತ್ತು ಚಂಪಕ ದಂಪತಿಯು ತಮ್ಮ ಮಕ್ಕಳಾದ ಕೃತಿಕಾ ಮತ್ತು ಭರತೇಶ್ ಅವರಿಗೆ ಜೇಡಿಮಣ್ಣಿನಿಂದ ಹೇಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ತಮ್ಮ ಪೋಷಕರ ಮಾರ್ಗದರ್ಶನ ಹಾಗೂ ಸಹಕಾರದಿಂದ ಇಬ್ಬರು ಮಕ್ಕಳು ಮನೆಯಲ್ಲಿ ಜೇಡಿಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯು ನೆರೆಹೊರೆಯವರನ್ನು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ನಾವು ಪರಿಸರಕ್ಕೆ ಹಾನಿಕಾರಕವಾದ ಪಿಓಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು. ಆದ್ದರಿಂದ ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ನಾವು ಮನೆಯಲ್ಲೇ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಕೃಷಿಕ ಎಸ್.ಆರ್.ಶಿವಪ್ರಸಾದ್ ತಿಳಿಸಿದರು. ಶಿರಂಗಾಲ ಗ್ರಾಮದ ಎಸ್.ಆರ್.ಶಿವಪ್ರಸಾದ್ ಅವರ ಕುಟುಂಬದ ವತಿಯಿಂದ ತಯಾರಿಸುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಯು ಗ್ರಾಮಸ್ಥರು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಪಿಓಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಅಭಿಪ್ರಾಯಪಟ್ಟರು. ಈ ಕುಟುಂಬದ ವತಿಯಿಂದ ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ.











