
ಕುಶಾಲನಗರ ಆ.29 NEWS DESK : ವಿದ್ಯುತ್ ಅವಘಡದಿಂದ ಹಸುವೊಂದು ಸಾವನ್ನಪ್ಪಿದ ಘಟನೆ ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದ ವೃಂದಾ ಬಡಾವಣೆಯಲ್ಲಿ ನಡೆದಿದೆ. ವೃಂದಾ ಬಡಾವಣೆಯ ನಿವಾಸಿಗಳಾದ ಸುಮಿತ್ರಾ ಸುದಿಕುಮಾರ್ ಅವರ ಹಸು ಸಾವನ್ನಪ್ಪಿದೆ. ವೃಂದಾ ಬಡಾವಣೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಟಿ.ಸಿಯಿಂದ ವಿದ್ಯುತ್ ಪ್ರವಹಿಸಿ ಹಸು ಸಾವಿಗೀಡಾಗಿದೆ. ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಿಸಿದ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಟಿ.ಸಿ ಶಿಥಿಲಾವಸ್ಥೆಯಲ್ಲಿದೆ. ವಿದ್ಯುತ್ ತಂತಿಗಳ ಮೇಲ್ಪದರ ಸುಟ್ಟು ತಂತಿಗಳು ಕಾಣುತ್ತಿದೆ. ಈ ಬಗ್ಗೆ ಚೆಸ್ಕಾಂ ಗೆ ದೂರು ನೀಡಲಾಗಿತ್ತು. ಚೆಸ್ಕಾಂ ನ ನಿರ್ಲಕ್ಷ್ಯದಿಂದ ಮೂಖಪ್ರಾಣಿ ಸಾವನ್ನಪ್ಪಿದೆ. ಪಕ್ಕದಲ್ಲಿಯೇ ಗಣೇಶನ ಪೂಜೆ ನಡೆಯುತ್ತಿದೆ. ನೂರಾರು ಜನ ಆಗಮಿಸುತ್ತಿರುತ್ತಾರೆ. ಸಾರ್ವಜನಿಕರಿಗೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಚೆಸ್ಕಾಂ ನವರು ಟಿ.ಸಿ ದುರಸ್ತಿಗೊಳಿಸಬೇಕು. ಟಿ.ಸಿ ಬಳಿ ಸಾರ್ವಜನಿಕರು ನುಸುಳದಂತೆ ಬೇಲಿ ಅಳವಡಿಸಬೇಕು. ಹಾಗೆಯೇ 4 ತಿಂಗಳ ಗರ್ಭಿಣಿ ಹಸುವಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದಷ್ಟು ಬೇಗನೇ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಕುಶಾಲನಗರ ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಪ್ರಕಾಶ್, ಗ್ರಾಮದ ಮುಖಂಡರಾದ ಸುಕುಮಾರ್ ಹಾಗೂ ಇನ್ನಿತರರು ಇದ್ದರು.








