
ವಿರಾಜಪೇಟೆ ಸೆ.23 NEWS DESK : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯದ ಹಣ ಬಿಡುಗಡೆ ಮಾಡುವುದು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎ.ಸಿ.ಸಾಬು ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಪ್ಪಳ ನಗರದಲ್ಲಿ ನಡೆದ ಐದನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಟ್ಟಡ ನಿರ್ಮಾಣ ವಲಯದ ಸ್ಥಿತಿಗತಿ, ಕಾರ್ಮಿಕರ ಪರಿಸ್ಥಿತಿ, ಅಲ್ಲಿ ಸಂಭವಿಸುವ ಅಪಘಾತ ಸಾವು ನೋವು ಕಾರ್ಮಿಕರು ಅನುಭವಿಸುವ ಸಂಕಟಗಳು ಸರಕಾರದ ನೀತಿಗಳು ಅವುಗಳ ಪರಿಣಾಮಗಳ ಬಗ್ಗೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ಏಕಕಾಲದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸುವಂತೆ ತೀರ್ಮಾನವಾದ ಹಿನ್ನಲೆಯಲ್ಲಿ ವಿರಾಜಪೇಟೆಯಲ್ಲಿ ಕಾರ್ಮಿಕ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಕಾರ್ಮಿಕ ಸಂಘಟನೆಯವರು ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಎ.ಸಿ ಸಾಬು ಅವರು, ಕಟ್ಟಡ ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಇದುವರೆಗೂ ಸಿಗುತ್ತಿದ್ದ ಸೌಲಭ್ಯಗಳು ಸಿಗುತ್ತಿಲ್ಲ ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಕಳೆದ ಒಂದು ವರ್ಷದಿಂದ ಕೊಳೆಯುತ್ತಿವೆ. ಕಾರ್ಮಿಕರ ಜೀವನ ಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರಿಗೆ ನೇರವಾಗಿ ಸಂದಾಯವಾಗುವ ಸೌಲಭ್ಯಗಳನ್ನು ಕೊಡಲು ನಿರಾಶಕ್ತಿ ಕಾಣುತ್ತಿದೆ. ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಲಾದ ಅರ್ಜಿಗಳನ್ನು ಸಕಾರಣವಿಲ್ಲದೆ ರದ್ದುಗೊಳಿಸಲಾಗುತ್ತಿದೆ. ಕಲ್ಯಾಣ ಮಂಡಳಿಗೆ ಕಾರ್ಮಿಕರ ಹಿತಾಸಕ್ತಿ, ಸಾಮಾಜಿಕ ಸುರಕ್ಷತೆ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಕಲ್ಯಾಣ ಮಂಡಳಿಯ ಸದುದ್ದೇಶವು ಮಣ್ಣು ಪಾಲಾಗಿದೆ. ಕಲ್ಯಾಣ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ, ಬಡಜನ ವಿರೋಧಿ ನಡೆಯನ್ನು ಕಟ್ಟಡ ಕಟ್ಟಡ ಕಾರ್ಮಿಕರಾದ ನಾವು ಖಂಡಿಸುತ್ತೇವೆ. ಸರಕಾರದ ಈ ನಡೆಯನ್ನು ಸರಿಪಡಿಸಿಕೊಳ್ಳಬೇಕು ಎಂದರು. ಕೆಲಸದ ಸ್ಥಳಗಳಲ್ಲಿ ನಿರ್ಮಾಣ ಕೆಲಸಗಾರರಿಗೆ ಅಸುರಕ್ಷತೆ ಇದೆ. ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ ಒದಗಿಸುವಂತಾಗಬೇಕು, ಶೈಕ್ಷಣಿಕ ಧನಸಹಾಯ ಕಾಲ ಕಾಲಕ್ಕೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಶೈಕ್ಷಣಿಕ ಧನಸಹಾಯ ಒದಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.ಅನಾವಶ್ಯವಾದ ಕಿಟ್‍ಗಳನ್ನು ನೀಡುವುದನ್ನು ಬಿಟ್ಟು ಕಾರ್ಮಿಕರ ಕಲ್ಯಾಣದ ಬಗ್ಗೆ ಚಿಂತನೆ ನಡೆಸಬೇಕು. ಸರಕಾರದ ವಿವಿಧ ಯೋಜನೆಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಕಟ್ಟಡ ಕಾರ್ಮಿಕರು ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು. ಮನವಿಯಲ್ಲಿ ಮರಳು ಹಾಗೂ ಕೆಂಪು ಕಲ್ಲು ಹಾಗೂ ಕರಿ ಕಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಿಧಿ ದುರುಪಯೋಗ ನಿಲ್ಲುವಂತೆ, ಕೆಲಸದ ಸ್ಥಳಗಳಲ್ಲಿ ನಿರ್ಮಾಣ ಕೆಲಸಗಾರರಿಗೆ ಸುರಕ್ಷತೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಬೇಕು, ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲೆ ಬೆಲೆ ನಿಯಂತ್ರಣ ಆಗುವಂತೆ, ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ ಸೇರಿ 10 ಲಕ್ಷ ರೂಪಾಯಿ, ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಮತ್ತು ಸಮಾನ ಕೆಲಸಕ್ಕೆ ಸಮಾನ ಕೂಲಿಯನ್ನು ಖಾತ್ರಿಪಡಿಸುವಂತೆ, ರಾಜ್ಯದಾದ್ಯಂತ ರೈತರ ಭೂಮಿ ಕಸಿಯುವ ಭೂ ಸ್ವಾಧೀನ ನೀತಿ ಕೈ ಬಿಡಲು, 2021- 22 -23ರ ಸ್ಕಾಲರ್ಶಿಪ್ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇ ಮಾಡಿ 23 -24- 25 ಸ್ಕಾಲರ್ಶಿಪ್ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಇಲಾಖೆಯ ಸಿಬ್ಬಂದಿ ನವೀನ್ ಮನವಿ ಸ್ವೀಕರಿಸಿ ಮಾತನಾಡಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಪ್ರಧಾನ ಕಾರ್ಯದರ್ಶೀ ಶಾಜಿ ರಮೇಶ್, ಜಿಲ್ಲಾ ಖಜಾಂಚಿ ಖಾಸಿಂ ಕೆ.ಎ., ವಿರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಕೆ. ಹರಿದಾಸ್, ಪದಾಧಿಕಾರಿಗಳಾದ ಸಿ.ಎ. ಹಮೀದ್, ಸುಬ್ರಮಣಿ, ಆಲಿ, ನಾರಾಯಣ, ಲಲಿತಾಕ್ಷ, ಚೆಲುವರಾಜು, ಕುಮಾರ, ಪುಂಜಪ್ಪ ಸೇರಿದಂತೆ ಹಲವರು ಹಾಜರಿದ್ದರು.









