ವಿರಾಜಪೇಟೆ ಆ.12 NEWS DESK : ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ ಹೇಳಿದರು. ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಭಾರತದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ 134ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರತಿವರ್ಷ ಆಗಸ್ಟ್ 12ರಂದು ಗ್ರಂಥಪಾಲಕರ ದಿನಾಚರಣೆ ಆಚರಿಸಲಾಗುತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರನ್ನು ಸ್ಮರಿಸಬೇಕಾಗಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಹಾಗೂ ಅಂತರ್ಜಾಲದ ಮೂಲಕ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರುವುದಕ್ಕೆ ಗ್ರಂಥಾಲಯಗಳ ಸೇವೆಯೂ ಪ್ರಮುಖ ಕಾರಣವಾಗಿದೆ ಎಂದರು. ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪುಸ್ತಕಗಳ ಓದು ಅಗತ್ಯ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಓದುವ ಮೂಲಕ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪ್ರತಿದಿನ ಸ್ವಲ್ಪ ಸಮಯವನ್ನು ವೃತ್ತಪತ್ರಿಕೆ ಹಾಗೂ ಪುಸ್ತಕಗಳ ಓದಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಗ್ರಂಥಪಾಲಕಿ ಡಾ. ಮುತ್ತಮ್ಮ ಮಾತನಾಡಿ, ಭಾರತದಲ್ಲಿ ಗ್ರಂಥಾಲಯ ವಿಜ್ಞಾನವನ್ನು ಬೆಳೆಸುವ ಹಾಗೂ ಪ್ರಚಾರ ಮಾಡುವಲ್ಲಿ ಡಾ. ಎಸ್.ಆರ್. ರಂಗನಾಥನ್ ಅವರ ಕೊಡುಗೆ ಅಪಾರವಾಗಿದೆ. ಗ್ರಂಥಾಲಯ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಅನನ್ಯವಾಗಿರುವುದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಇಂದು ಆಧುನಿಕ ಶೈಲಿಯ ಗ್ರಂಥಾಲಯಗಳನ್ನು ಕಾಣಲು ಸಾಧ್ಯವಾಗಿರುವುದಕ್ಕೆ ರಂಗನಾಥನ್ ಅವರ ಕೊಡುಗೆ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಕಳೆಯುವುದರಿಂದ ಅವರ ಮುಂದಿನ ಜೀವನ ಹೆಚ್ಚು ಜ್ಞಾನಮಯವಾಗಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಐ.ಪಿ. ಬಿಂದ್ಯ ಅವರು ಡಾ. ಎಸ್.ಆರ್. ರಂಗನಾಥನ್ ಅವರ ಜೀವನ ಹಾಗೂ ಸಾಧನೆ ಕುರಿತು ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಮುಖ್ಯಸ್ಥ ಸೋಮಣ್ಣ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ್, ಬೋಜಮ್ಮ, ವನಿತಾ, ಮಾಣಿಕ್ಯ, ಸುನಿಲ್, ಪವಿತ್ರ, ಭೂಮಿಕ, ಲೋಚನ, ಅನುಪಮ, ಗಾಯತ್ರಿ, ಬಾಬು, ಅಕ್ಷರ ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳಾದ ಸೋಮನಾಥ್, ಹರೀಶ್, ರೇಷ್ಮ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











