
ಮಡಿಕೇರಿ ಸೆ.23 NEWS DESK : ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಜಾತಿ ಜನಗಣತಿ ನಡೆಸಲು ಹೊರಟಿರುವ ರಾಜ್ಯ ಸರಕಾರ ಕ್ರೈಸ್ತರನ್ನು ಹಿಂದೂ ಜಾತಿಗಳ ನಡುವೆ ಎಳೆದು ತರುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಡಿಸಿದರು. ಸರಕಾರ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ಸೃಷ್ಟಿಸುತ್ತಿದೆ. ಕ್ರೈಸ್ತರನ್ನು ಹಿಂದೂ ಜಾತಿಗಳ ನಡುವೆ ಎಳೆದು ತಂದು ಎಲ್ಲಾ ಸಮಾಜಗಳನ್ನು ದಿಕ್ಕು ತಪ್ಪಿಸುತ್ತಿದೆ. ಮತಾಂತರ ನಿರ್ಬಂಧ ಕಾಯ್ದೆಯನ್ನು ಸರಕಾರವೇ ದುರ್ಬಲಗೊಳಿಸುತ್ತಿದೆ ಎಂದು ಎಂದು ಆರೋಪಿಸಿದರು. ಕಾಂತರಾಜು ಆಯೋಗ ಮತ್ತು ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವಲ್ಲಿ ವಿಫಲವಾಗಿರುವ ಸರಕಾರ ಸಾಮಾಜಿಕ ನ್ಯಾಯದ ವಿಚಾರವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ದಲಿತರ ನಡುವೆ ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಜಾತಿ ಸಮೀಕ್ಷೆ ಮಾಡುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಸಮೀಕ್ಷೆಗೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್ಸಿ ಕ್ರೈಸ್ತ ಜಾತಿಗಳನ್ನು ಸರಕಾರ ಕೈ ಬಿಡಬೇಕು ಮತ್ತು ಅಧಿಕೃತ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿಗಳ ಕ್ರೈಸ್ತ ಟ್ಯಾಗ್ ತೆಗೆಯಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕುಕ್ಕೇರ ಅಜಿತ್, ಸಾಮಾಜಿಕ ಕಾರ್ಯಕರ್ತ ಚಂದ್ರ ಉಡೋತ್, ಹಿತರಕ್ಷಣಾ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕುಮಾರ್, ಶರತ್, ಯೋಗೇಶ್, ಭವನ್, ಮಡಿಕೇರಿ ತಾಲ್ಲೂಕು ಸಂಯೋಜಕ ಬಾಲಕೃಷ್ಣ ರೈ, ವಿರಾಜಪೇಟೆ ತಾಲ್ಲೂಕು ಸಂಯೋಜಕ ಅನಿಲ್, ಸೋಮವಾರಪೇಟೆ ತಾಲ್ಲೂಕು ಸಂಯೋಜಕ ಉಮೇಶ್, ಬಿಜೆಪಿ ಪ್ರಮುಖರಾದ ಎಸ್.ಸಿ.ಸತೀಶ್, ಕೆ.ಎಸ್.ರಮೇಶ್, ಬೊಳ್ಳಿರ ಬಿ.ಅಯ್ಯಪ್ಪ, ಕನ್ನಿಕೆ, ಸಬಿತಾ ಸೇರಿದಂತೆ ಸಮುದಾಯಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದರು.








