
ಮಡಿಕೇರಿ ಸೆ.23 NEWS DESK : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 21.09 ಲಕ್ಷ ನಿವ್ವಳ ಲಾಭವನ್ನು ಹೊಂದಿಕೊಂಡಿರುವುದಾಗಿ ಸಂಘದ ಅಧ್ಯಕ್ಷರಾದ ಕೆ.ಬಿ.ಗಿರೀಶ್ ಗಣಪತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 2002ರಲ್ಲಿ ಆರಂಭಗೊಂಡು ಕಳೆದ ಇಪ್ಪತ್ತಮೂರು ವರ್ಷಗಳಿಂದ ತನ್ನ ಸ್ವಂತ ಬಂಡವಾಳದ ಮೂಲಕ ವ್ಯವಹಾರ ನಡೆಸುತ್ತಾ ಪ್ರಗತಿಯ ಪಥದಲ್ಲಿ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ ಮುನ್ನಡೆಯುತ್ತಿದೆ. ಸಂಘದ ಮಹಾಸಭೆ ಸೆ.25 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೊಹಿನೂರು ರಸ್ತೆಯ ಬಳಿಯಲ್ಲಿರುವ ಸಂಘದ ಸ್ವಂತ ಕಟ್ಟಡದಲ್ಲಿ ನಡೆಯಲಿದೆಯೆಂದು ಮಾಹಿತಿ ನೀಡಿದರು. ಸಂಘವು ಒಟ್ಟು 1879 ಸದಸ್ಯರನ್ನು ಹೊಂದಿದ್ದು, 90.20ಲಕ್ಷ ಪಾಲು ಬಂಡವಾಳವನ್ನು ಸಂಗ್ರಹಿಸಿದೆ. ಕಳೆದ ಮಾರ್ಚ್ ಅಂತ್ಯಕ್ಕೆ ಸಂಘವು ಒಟ್ಟು 31.15 ಕೋಟಿ ಠೇವಣಾತಿಗಳನ್ನು ಸಂಗ್ರಹಿಸಿದ್ದು, 10.37 ಕೋಟಿಯನ್ನು ವಿವಿಧ ಸಾಲಗಳ ರೂಪದಲ್ಲ ನೀಡಿದೆ. ಸಾಲ ವಸೂಲಾತಿ ಶೇ.90 ರಷ್ಟು ಇರುವುದಾಗಿ ವಿವರಗಳನ್ನು ನೀಡಿದರು. ಸಂಘದ ಪಾಲು ಬಂಡವಾಳದ ಮಿತಿಯನ್ನು ಪ್ರತಿ ಸದಸ್ಯರಿಗೆ 1 ಸಾವಿರ ರೂ.ಗಳಿಂದ 2,500ರೂ.ಗಳಿಗೆ ಹೆಚ್ಚಿಸಲಾಗಿದೆ. ಸಂಘದ ಸದಸ್ಯರು ಬಾಕಿ ಮೊತ್ತವನ್ನು ಆದಷ್ಟು ಶೀಘ್ರ ನೀಡುವಂತೆ ಮನವಿ ಮಾಡಿದರು. :: ವಿರಾಜಪೇಟೆಯಲ್ಲಿ ನೂತನ ಶಾಖೆಯ ಚಿಂತನೆ :: ಸಂಘವು 2007ರಲ್ಲಿ ಕುಶಾಲನಗರ ಮತ್ತು 2012ರಲ್ಲಿ ಸಿದ್ದಾಪುರದಲ್ಲಿ ಶಾಖೆಯನ್ನು ಹೊಂದಿದೆ. ಮೂರನೇ ಶಾಖೆಯನ್ನು ಮುಂಬರುವ ವರ್ಷಗಳಲ್ಲಿ ವಿರಾಜಪೇಟೆಯಲ್ಲಿ ತೆರೆಯಬೇಕೆನ್ನುವ ಚಿಂತನೆ ಹೊಂದಿರುವುದಾಗಿ ಹೇಳಿದರು. ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಂ.ಗಣೇಶ್ ಅವರು ಮಾತನಾಡಿ, 2018ರ ಬಳಿಕ 2022ರವರೆಗೆ ಜಿಲ್ಲೆಯಲ್ಲಿನ ಪ್ರಾಕೃತಿಕ ವಿಕೋಪ, ಕೊರೋನ ಮೊದಲಾದ ಸಮಸ್ಯೆಗಳಿಂದ ಸಾಲ ವಸೂಲಾತಿಯಲ್ಲಿ ಸಂಘ ಹಿನ್ನಡೆಯನ್ನು ಕಂಡಿತ್ತು. ಇದೀಗ ಸಂಘ ಸಾಲ ವಸೂಲಾತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದ್ದು, ಮುಂದಿನ ವರ್ಷದಲ್ಲಿ ಸಾಲ ವಸೂಲಾತಿಯ ಪ್ರಮಾಣ ಶೇ.98ನ್ನು ಮೀರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಎಸ್.ಐ.ಮುನೀರ್ ಅಹಮದ್, ಪಿ.ಚಂದ್ರಶೇಖರ್, ಕಾಶಿ ಕಾವೇರಪ್ಪ, ಸಿಇಒ ಶ್ಯಾಮಲಾ ಟಿ.ಡಿ. ಉಪಸ್ಥಿತರಿದ್ದರು.









