
ಮಡಿಕೇರಿ ಸೆ.23 NEWS DESK : ಅರೆಭಾಷಿಕರ ಹಿಡುವಳಿ, ಸಂಸ್ಕೃತಿ, ಪರಂಪರೆ, ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿಕೊಳ್ಳಲು ಅರೆಭಾಷಿಕ ಗೌಡರು ತಪ್ಪದೆ ರಾಜ್ಯ ಹಾಗೂ ಕೇಂದ್ರ ಸರಕಾರದ ಜಾತಿ ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಣತಿದಾರರಿಗೆ ನಿಖರ ಮಾಹಿತಿಯನ್ನು ನೀಡಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಸೂದನ ಎಸ್.ಈರಪ್ಪ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಜನಗಣತಿಯಲ್ಲಿ ಅರೆಭಾಷೆ ಗೌಡರು ಯಾವುದೇ ಗೊಂದಲಗಳಿಗೆ ಒಳಗಾಗದೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಶೈಕ್ಷಣಿಕ ಮತ್ತು ಕಂದಾಯ ದಾಖಲೆಗಳಲ್ಲಿ ಅರೆಭಾಷಿಕರ ಜಾತಿ ‘ಗೌಡ’ ಎಂದೇ ದಾಖಲಾಗಿರುವುದರಿಂದ ಗಣತಿ ಸಂದರ್ಭ ಜಾತಿಯ ಕಾಲಂನಲ್ಲಿ ಗೌಡ ಎಂದೂ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಕೋರಿದ್ದಾರೆ. ಉಪಜಾತಿ ಕಾಲಂನಲ್ಲಿ ಅರೆಭಾಷೆ ಗೌಡ ಮತ್ತು ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂದು ನಮೂದಿಸುವಂತೆ ತಿಳಿಸಿದ್ದಾರೆ.









