
ಸೋಮವಾರಪೇಟೆ, ಸೆ.25 NEWS DESK : ಸಮಾಜದಲ್ಲಿ ಮೌಢ್ಯಾಚರಣೆ ಹೆಸರಿನಲ್ಲಿ ಕೆಲವು ದೇವಮಾನವ ರೆಂಬ ಸೋಗಿನಲ್ಲಿ ಜನರಿಗೆ ಮೋಸ, ವಂಚನೆ ಮಾಡುತ್ತಿರುವುದು ಕಂಡುಬರುತ್ತಿದೆ. ಕೆಲವು ಮುಗ್ಧರು ಇದನ್ನು ನಂಬಿ ಶೋಷಣೆಗೆ ಒಳಗಾಗು ತ್ತಿದ್ದಾರೆ. ಇಂತಹ ಶೋಷಣೆಯನ್ನು ತಡೆಗಟ್ಟುವ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಪ್ರಗತಿಪರ ಸಂಘಟನೆಗಳು ಮುಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಹಾಗೂ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಅಧ್ಯಾಪಕ ಎಂ.ಎನ್.ವೆಂಕಟನಾಯಕ್ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಾದಾಪುರ ಶ್ರೀಮತಿ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ( ಎನ್‍ಎಸ್‍ಎಸ್ ) ಘಟಕದ ವತಿಯಿಂದ “ನಶಮುಕ್ತ ಭಾರತ ಅಭಿಯಾನ:2025” ಎಂಬ ಕೇಂದ್ರ ವಿಷಯದಡಿ ಗರಗಂದೂರು ಗ್ರಾಮದಲ್ಲಿ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ
ಪವಾಡ ರಹಸ್ಯ ಬಯಲು ಕಾರ್ಯಕ್ರಮ ದಲ್ಲಿ ವಿವಿಧ ಪವಾಡಗಳ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುವ ಮೂಲಕ ಪವಾಡಗಳ ಹಿಂದಿರುವ ಸತ್ಯ ಹಾಗೂ ವೈಜ್ಞಾನಿಕ ಕಾರಣಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದರು. ಶೂನ್ಯದಿಂದ ಬೂದಿ, ನೀರು ಸೃಷ್ಟಿ ಮತ್ತಿತರ ಪವಾಡಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಮ್ಮ ಬಾಯಿಯಲ್ಲಿ ಮತ್ತು ಕೈಯಲ್ಲಿ ಕರ್ಪೂರ ಹಚ್ಚಿ ಅದು ಉರಿಯುತ್ತಿದ್ದಂತೆ ಅಚ್ಚರಿಯೊಂದಿಗೆ ನೆರೆದಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂತೋಷ ವಕ್ತಪಡಿಸಿದರು. ಕೈ ಗಳಿಗೆ ಬಣ್ಣ ಹಚ್ಚಿ ಮೋಸ ಮಾಡುವ ಹಿಂದಿರುವ ಸತ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಾವು ಯಾವಾಗಲೂ ಬದುಕಿನಲ್ಲಿ ನಡೆಯುವ ಘಟನೆಗಳನ್ನ ತರ್ಕಗಳ ಆಧಾರದ ಮೇಲೆ, ಕಾರಣಗಳ ಮೇಲೆ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಲೇ ಇರಬೇಕು. ಪವಾಡಗಳನ್ನು ಮಾಡುವ ಮೂಲಕ ಜನರಿಗೆ ಮೋಸ, ವಂಚನೆ ಮಾಡುವವರ ವಿರುದ್ಧ ಧ್ವನಿಯೆತ್ತಿ ಹೋರಾಟ ಮಾಡಬೇಕು ಎಂದು ವೆಂಕಟನಾಯಕ್ ಹೇಳಿದರು. “ವೈಜ್ಞಾನಿಕ ಮನೋಭಾವ ಬೆಳವಣಿಗೆ” ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಹಾಗೂ ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಅಂಧಶ್ರದ್ಧೆ ಹಾಗೂ ಮೌಢ್ಯಾಚರಣೆ ನಿರ್ಮೂಲನೆ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮದ ಮೂಲಕ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ತಮಗೆ ಇದ್ದ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಹುಡುಕಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಪ್ರೇಮಕುಮಾರ್ ಹೇಳಿದರು. ಕಾಲೇಜಿನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ಯಾವುದೇ ಸಮಸ್ಯೆಯನ್ನು ನಾವು ವೈಜ್ಞಾನಿಕವಾಗಿ ಚಿಂತನೆ ಮಾಡಿದರೆ. ಅದಕ್ಕೆ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಕೆ.ವಿ. ರಾಜಸುಂದರಂ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಎನ್.ಎನ್. ಮನೋಹರ್, ಹರದೂರು ಗ್ರಾಮ ಪಂಚಾಯತಿ ಸದಸ್ಯೆ ಉಷಾ ಇದ್ದರು. :: ಸಂವಾದ :: ಪವಾಡ ರಹಸ್ಯ ಕಾರ್ಯಕ್ರಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವೆಂಕಟನಾಯಕ್ ಅವರೊಂದಿಗೆ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಪವಾಡಗಳ ಹಿಂದಿರುವ ರಹಸ್ಯಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.









