
ಮಡಿಕೇರಿ ಸೆ.29 NEWS DESK : ಮಡಿಕೇರಿಯ ದಸರಾ ಜನೋತ್ಸವದ ಸಂಭ್ರಮಗಳ ನಡುವೆಯೇ, ಕ್ರೀಡ ಪ್ರತಿಭೆಗಳ ಉತ್ತೇಜನಕ್ಕೆ ದಸರಾ ಕ್ರೀಡಾ ಸಮಿತಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಶುಕ್ರವಾರದಂದು ನಡೆದ ‘ಚದುರಂಗ ಸ್ಪರ್ಧೆ’ಯಲ್ಲಿ ನೂರಾರು ಮಕ್ಕಳು, ಸಾರ್ವಜನಿಕರು ಪಾಲ್ಗೊಂಡುದು ವಿಶೇಷ. ನಗರದ ಗಾಂಧಿ ಮೈದಾನದ ಬಳಿಯ ರಾಜದರ್ಶನದ ಸಭಾಂಗಣದಲ್ಲಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕರ್ಕೆರ ಅವರ ಆಸಕ್ತಿ ಮತ್ತು ಮುತುವರ್ಜಿಯಿಂದ ಆಯೋಜಿತ ಚದುರಂಗ ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ಸಂಜೆಯವರೆಗು ನಡೆಯಿತು. ಸ್ಪರ್ಧೆಯಲ್ಲಿ ವಿವಿಧ ಶಾಲಾ ಕಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ 300 ಕ್ಕೂ ಹೆಚ್ಚಿನ ಸ್ಪರ್ಧೆಗಳು ಪಾಲ್ಗೊಂಡಿದ್ದರು. :: ಕ್ರೀಡೆಯನ್ನು ಕಡೆಗಣಿಸದಿರಿ :: ಚದುರಂಗ ಸ್ಪರ್ಧೆಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರು ಮಾತನಾಡಿ, ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ವ್ಯಾಸಂಗ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರ್ರೀಡಾಚಟುವಟಿಕೆಗಳಾಗಿದೆ. ಆರೋಗ್ಯಕರವಾದ ಚಿಂತನೆಗೆ ದೈಹಿಕ ಸ್ವಾಸ್ಥ್ಯವು ಅತ್ಯಂತ ಪ್ರಮುಖ. ಈ ಹಿನ್ನೆಲೆಯಲ್ಲಿ ದೈಹಿಕವಾದ ಉತ್ತಮ ಆರೋಗ್ಯಕ್ಕಾಗಿ ಕ್ರೀಡಾಚಟುವಟಿಕೆಗಳತ್ತ ಆಸಕ್ತರಾಗಬೇಕೆಂದರು. ಬುದ್ಧಿವಂತರ ಕ್ರೀಡೆಯೆಂದೇ ಖ್ಯಾತಿಯನ್ನು ಹೊಂದಿರುವ ಚದುರಂಗ ಎನ್ನುವುದು ಬುದ್ಧಿಗೆ ಕಸರತ್ತನ್ನು ನಿಡುವ ಆಟವಾಗಿದೆ. ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳಿಗೆ ಯೋಗ್ಯ ವ್ಯಾಯಾಮ ದೊರಕಿದಂತಾಗುವುದಲ್ಲದೆ, ಚುರುಕುತನ, ಏಕಾಗ್ರತೆ ಮೈಗೂಡುತ್ತದೆಂದು ತಿಳಿಸಿ, ‘ಚದುರಂಗ’ ಆರಂಭಗೊಂಡದ್ದು ಭಾರತದಲ್ಲಿ. ಈ ಹಿನ್ನೆಲೆಯಲ್ಲಿ ಇದರ ನಿಜ ವಾರಿಸುದಾರರಾದ ಮಕ್ಕಳು ಚದುರಂಗ ಆಟದಲ್ಲಿ ಆಸಕ್ತರಾಗುವಂತೆ ಕರೆ ನೀಡಿದರು. ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿ, ಮೊಬೈಲ್ ಆಕರ್ಷಣೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚಾಗಿ ಸಿಲುಕುತ್ತಿದ್ದಾರೆ. ಇಂತಹ ಸಂದಿಗ್ಧತೆಗಳ ನಡುವೆಯೂ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಇದಕ್ಕೆ ಕಾರಣರಾದ ತಂದೆ ತಾಯಂದಿರನ್ನು ಅಭಿನಂದಿಸಲೆ ಬೇಕಾಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಅನುದಾನ ಲಕ್ಷವಾದರೆ, ಖರ್ಚು 5 ಲಕ್ಷ- ದಸರಾ ಉತ್ಸವದ ಸಂದರ್ಭ ಕ್ರೀಡಾ ಚಟುವಟಿಕೆಗಳಿಗಾಗಿ ಸುಮಾರು 1 ಲಕ್ಷದಷ್ಟು ಅನುದಾದ ಮಾತ್ರ ಕ್ರೀಡಾ ಸಮಿತಿಗೆ ದೊರಕುತ್ತದೆಯಾದರೆ, ಕಳೆದ ಕೆಲ ವರ್ಷಗಳಿಂದ ಈ ಅನುದಾನವನ್ನೂ ಮೀರಿ, ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರೀಡಾ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕರ್ಕೆರ ಅವರು 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ವ್ಯಯಿಸುತ್ತಿದ್ದಾರೆ. ಯುವ ಸಮೂಹದ ಉತ್ತೇಜನಕ್ಕಾಗಿನ ಇವರ ಪರಿಶ್ರಮ ಶ್ಲಾಘನಾಹರ್ವೆಂದು ನುಡಿದರು. ಮುಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.ಸಮಾರಂಭದಲ್ಲಿ ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ನಗರಸಭಾ ಸದಸ್ಯರುಗಳಾದ ಮೇರಿ ವೇಗಾಸ್, ಸಬಿತಾ, ಚಿತ್ರಾವತಿ, ದಶ ಮಂಟಪ ಸಮಿತಿ ಅಧ್ಯಕ್ಷರಾದ ಹರೀಶ್ ಅಣ್ವೇಕರ್, ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಪ್ರಮುಖರಾದ ಪ್ರಭು ರೈ ಉಪಸ್ಥಿತರಿದ್ದರು.









