
ಮಡಿಕೇರಿ ಸೆ.27 NEWS DESK : ಸಮಾಜದ ಏಳಿಗೆಗೆ ಶ್ರಮಿಸಿದವರನ್ನು, ಬಡವರ ಕಷ್ಟಕ್ಕೆ ನೆರವಾದವರನ್ನು, ನೊಂದವರಿಗೆ ನೆರವಾಗಿ ನಿಂತವರನ್ನು ಸದಾ ನೆನಪಿಸಿಕೊಳ್ಳುತ್ತಾ ಬರುತ್ತಿದ್ದಾರೆಯೇ ಹೊರತು ಶ್ರೀಮಂತರನ್ನು ನೆನೆಸಿಕೊಳ್ಳುವುದಿಲ್ಲವೆಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಹೇಳಿದರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಎನ್.ಎಸ್.ಎಸ್ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸಾಗಿ ಹುಟ್ಟಿತು. ವಿದ್ಯಾರ್ಥಿಗಳನ್ನು ಶಿಕ್ಷಣದ ಹಂತದಲ್ಲಿ ಸಮಾಜ ಮುಖಿಯಾಗಿ ಬೆಳೆಸುವ ಗುರಿಯನ್ನು ಇದು ಹೊಂದಿದೆ. ಇಂದಿನ ಪ್ರಸ್ತುತ ಸಮಾಜವನ್ನು ನೋಡುವುದಾದರೆ ಮದರ್ ತೆರೇಸಾ, ಸರೋಜಿನಿ ನಾಯ್ಡುರಂತಹ ಪ್ರಮುಖ ಸಮಾಜ ಸುಧಾರಕರು ಸಮಾಜ ಸೇವಕರನ್ನು ನಾವು ನೆನಪಿಟ್ಟುಕೊಂಡಿರುವುದು ಅವರ ಶ್ರೀಮಂತಿ ಇಂದಲ್ಲ ಬದಲಾಗಿ ಸಮಾಜಕ್ಕೆ ಅವರು ನೀಡಿದಂತಹ ಸೇವೆಯ ಕಾರಣದಿಂದ. ಆದ್ದರಿಂದ ವಿದ್ಯಾರ್ಥಿಗಳು ಈ ಹಂತದಲ್ಲಿ ಸಮಾಜಕ್ಕೆ ತಮ್ಮಿಂದಾದಂತಹ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧರಾಗಿರಬೇಕು. ಸೇವಾ ಮನೋಭಾವನೆ ಇದ್ದವರು ಸದಾ ಇತರರ ಹಿತವನ್ನು ಕಾಪಾಡುತ್ತಾ ಶ್ರೇಷ್ಠ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ ಎಂದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮಾಜಿ ಅಧಿಕಾರಿ ಹೆಚ್.ವಿ.ನಾಗರಾಜು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಲ್ಲಿ ಸಮಾಜದಲ್ಲಿ ಹೀಗೆ ಬದುಕಬೇಕು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಕಲಿಸುವುದರೊಂದಿಗೆ ಸಮಾಜದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳನ್ನು ಹೇಗೆ ಬಗೆಹರಿಸಬೇಕೆಂದು ಕಲಿಸುವ ಬಹುದೊಡ್ಡ ವೇದಿಕೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರೊಂದಿಗೆ ಸಹಜೀವನ, ಸಹ ಭೋಜನ, ಶಿಸ್ತು, ಸಹಕಾರ, ದೇಶಭಕ್ತಿಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ, ದೈಹಿಕ ಆರೋಗ್ಯದೊಂದಿಗೆ ಪರಿಸರ ಜಾಗೃತಿಯನ್ನು ಮೂಡಿಸಲು ಎನ್ಎಸ್ಎಸ್ ಸಹಕಾರಿಯಾಗಿದೆ ಎಂದರು. ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಪ್ರಿಯ ಮುದ್ದಪ್ಪ , ಎನ್.ಎಸ್.ಎಸ್.ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ಡಾ.ವೀಣಾ , ರಾಘವೇಂದ್ರ, ಸೋಮಣ್ಣ, ನಿರ್ಮಿತ, ಅಕ್ಷಿತಾ, ಮಾಣಿಕ್ಯ, ವನಿತ, ಬೋಜಮ್ಮ , ಕಾವೇರಮ್ಮ , ಗುಲ್ನಾರ್ ಬಾನು ಆಡಳಿತಾತ್ಮಕ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಜರಿದ್ದರು.








