
ಮಡಿಕೇರಿ NEWS DESK ಸೆ.27 : ಕರ್ನಾಟಕ ರಾಜ್ಯ ಸರಕಾರದ ಸಮಾಜಿಕ ಮತ್ತು ಅರ್ಥಿಕ ಗಣತಿ ಸಮೀಕ್ಷೆಯಲ್ಲಿ ಕೊಡವ ಭಾಷಿಕ 21 ಸಮುದಾಯದವರು ಧರ್ಮದ ಕಾಲಂನಲ್ಲಿ ಕೊಡವ, ಜಾತಿಯ ಕಾಲಂನಲ್ಲಿ ಕೊಡವ ಮತ್ತು ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಜಾತಿಯ ಹೆಸರನ್ನು ನಮೂದಿಸಬೇಕೆಂದು ಮೂರ್ನಾಡಿನಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ನೀಡಿರುವ ಹೇಳಿಕೆಗೆ ಕೊಡವ ಭಾಷಿಕ ಸಮುದಾಯಗಳ ಕೂಟದ ಸಹಮತವಿಲ್ಲವೆಂದು ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಭಾಷಿಕ ಸಮುದಾಯಗಳ ಕೂಟ ಮತ್ತು ವಿವಿಧ ಕೊಡವ ಭಾಷಿಕ ಸಮಾಜಗಳ ಪ್ರಮುಖರು ಸಾಧಕ ಬಾಧಕಗಳನ್ನು ಚರ್ಚಿಸಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಜಾತಿವಾರು ಪಟ್ಟಿಯಲ್ಲಿ ಪ್ರಕಟಿಸಿರುವ ಜಾತಿಯ ಹೆಸರನ್ನು, ಭಾಷೆಯ ಕಾಲಂನಲ್ಲಿ ಕೊಡವ ಭಾಷೆ ಮತ್ತು ಉಪಜಾತಿ ಕಾಲಂನಲ್ಲಿ ಯಾವುದೂ ಅನ್ವಯಿಸುವುದಿಲ್ಲ ಎಂದು ನಮೂದಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸಾಮಾಜಿಕ ಮತ್ತು ಅರ್ಥಿಕ ಗಣತಿ ಕಾರ್ಯದಲ್ಲಿ ಕೊಡವ ಭಾಷಿಕರು ಪಾಲ್ಗೊಳ್ಳುವಂತೆ ಸರಕಾರದ ಪರವಾಗಿ ಕರೆ ನೀಡಬಹುದಾಗಿತ್ತು. ಆದರೆ ಅಧ್ಯಕ್ಷರು ಇಂತಹದ್ದೇ ಧರ್ಮವನ್ನು ನಮೂದಿಸಿ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಕೊಡವ ಸಾಹಿತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೌಕಟ್ಟಿನಲ್ಲಿ ಕೊಡವ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಬೆಳಸಲು ರಚನೆಗೊಂಡಿರುವ ಸರಕಾರಿ ವ್ಯವಸ್ಥೆಯಾಗಿದೆ. ಆದರೆ ಈ ಚೌಕಟ್ಟನ್ನು ಮೀರಿರುವ ಅಧ್ಯಕ್ಷರು 21 ಕೊಡವ ಭಾಷಿಕ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುವ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿರುವ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು, ಅಕಾಡೆಮಿ ಅಧ್ಯಕ್ಷರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.










